ಶ್ರೀಕೃಷ್ಣ ಪರಮಾತ್ಮನ ವಿಚಾರಧಾರೆಯನ್ನು ಪಾಲಿಸಬೇಕು: ಸತೀಶ್ ಜಾರಕಿಹೊಳಿ

1 month ago 149

ಬೆಳಗಾವಿ : ಶ್ರೀಕೃಷ್ಣ ಪರಮಾತ್ಮನ ಆದರ್ಶ, ಸಿದ್ದಾಂತ, ವಿಚಾರಧಾರೆಗಳನ್ನು ಪಾಲಿಸುವ ಮೂಲಕ ಯುವಜನತೆ ದೇಶದ ಅಭಿವೃದ್ದಿಯ ಹರಿಕಾರರಾಗಬೇಕು ಎಂದು ಯಮಕನಮರಡಿ ಶಾಸಕರಾದ ಸತೀಶ್ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ(ಆ.19) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧ, ಬಸವ, ವಾಲ್ಮೀಕಿ ಅಂಬೇಡ್ಕರ್ ಅವರು ಬೆಳಕು ಮತ್ತು ಜ್ಞಾನದ ಸಂಕೇತ, ಪ್ರತಿಯೊಬ್ಬರೂ ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು, ಬುದ್ಧನ ಶಾಂತಿ, ವಾಲ್ಮೀಕಿ ಸಂದೇಶ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಅವರ ಹೃದಯವೈಶಾಲ್ಯತೆ ನಮಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.

ಮನುಷ್ಯರ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆ ಆಗಬಾರದು, ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಮಹಾತ್ಮರು ಬೆಳಗಿದ ದೀಪಗಳು ಸೀಮಾತೀತ. ಅವರ ಬೆಳಕಿನ ಕಿರಣಗಳಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.

ಶ್ರೀ ಕೃಷ್ಣ ಪರಮಾತ್ಮನ ಅವತಾರ ಆಯಾ ಕಾಲಕ್ಕೆ ಸೀಮಿತವಾಗಿತ್ತು. ಇವತ್ತಿನ ಯುಗದಲ್ಲಿ ಶಿಕ್ಷಣ ಪದ್ಧತಿ ಹಾಗೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ಮೌಲ್ಯ ಬಿತ್ತುವ ಕಾರ್ಯ ಮಾಡಬೇಕು. ಯುವ ಜನತೆಗೆ ದೇಶದಲ್ಲಿ ಬದಲಾವಣೆ ತರುವ ಶಕ್ತಿ ಇದೆ. ಭವಿಷ್ಯತ್ತಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಯುವ ಪೀಳಿಗೆ ಅರಿತು ಮುಂದುವರೆಯಬೇಕು ಎಂದು ತಿಳಿಸಿದರು.

ಯುವ ಜನತೆ ಜಾತಿ ಪದ್ಧತಿಯಿಂದ ಹೊರಗೆ ಬಂದು ಪಾರಂಪರಿಕವಾಗಿ ಬಂದ ಕುಲಕಸಬುಗಳಿಗೆ ಸೀಮಿತವಾಗದೆ ಉನ್ನತ ಹುದ್ದೆಗಳಲ್ಲಿ ಮುಂದುವರೆಯಬೇಕು. ಸಂವಿಧಾನ ರಚನೆಯ ನಂತರ ಎಲ್ಲ ವರ್ಗದ ಸಮಾಜಕ್ಕೆ ಸಮಾನತೆ ಡಾ. ಬಿ.ಆರ್.ಅಂಬೇಡ್ಕರ್ ಅವರು ತಂದು ಕೊಟ್ಟಿದಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಸಮಾರಂಭದಲ್ಲಿ ವಿಶೇಷ ಉಪನ್ಯಾಸರಾಗಿ ಮಾತನಾಡಿದ ಬೆಳಗಾವಿ ಮರಾಠಾ ಮಂಡಳ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಬಸವರಾಜ ಹಮ್ಮಣ್ಣವರ ಅವರು, ಶ್ರೀಕೃಷ್ಣ ಪರಮಾತ್ಮನು ನಮ್ಮಂತೆ ಭೂಮಿಯ ಮೇಲೆ ಮಾನವ ಜನ್ಮತಾಳಿ ಬದುಕಿ ಬಾಳಿದವನು. ದೇವರಾಗಲು ಮೂಲ ಕಾರಣ ಶಿಕ್ಷಣವಾಗಿದೆ ಎಂದರು.

ಶ್ರೀಕೃಷ್ಣ ಶಿಕ್ಷಣದಲ್ಲಿರುವ 64 ವಿದ್ಯೆಗಳನ್ನು 64 ದಿನಗಳಲ್ಲಿ ಕಲಿತಿದ್ದಾರೆ. ಗುರು ಶಿಷ್ಯರ ಸಂಬಂಧ ಶಿಕ್ಷಣ ಮಹತ್ವದ ಜೊತೆ ರಾಜಕೀಯ, ರಾಜ್ಯಾಡಳಿತ ನಿಯಮಗಳನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಕೃಷ್ಣ ಎಂದರು.

ಸಮಗ್ರ ಸಮಾಜದ ಉದ್ದಾರಕ್ಕಾಗಿ ಜನಪ್ರತಿನಿಧಿಗಳಿಂದ ಹಿಡಿದು ಜನಸಾಮಾನ್ಯರು ಯಾವ ರೀತಿ ಜೀವನ ಮಾಡಬೇಕು ಎಂಬುವುದನ್ನು ಸ್ವತಃ ತಾವೇ ಜೀವನ ಸಾಗಿಸಿ ತೋರಿಸಿದ್ದಾರೆ ಎಂದು ಶ್ರೀ ಕೃಷ್ಣ ಪರಮಾತ್ಮನ ಜೀವನ ಸಾರವನ್ನು ಬಸವರಾಜ ಹಮ್ಮಣ್ಣವರ ಉಪನ್ಯಾಸದಲ್ಲಿ ತಿಳಿಸಿದರು.

ಶ್ರೀ ಕೃಷ್ಣನ ಭಾವಚಿತ್ರ ಮೆರವಣಿಗೆ :

ಇದಕ್ಕೂ ಮುಂಚೆ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರಗೆ ವಾದ್ಯಮೇಳ ಹಾಗೂ ಕಲಾ ತಂಡಗಳೊಂದಿಗೆ ಶ್ರೀ ಕೃಷ್ಣನ ಭಾವಚಿತ್ರದ ಭವ್ಯ ಮೆರವಣ ಗೆ ನಡೆಯಿತು. ಬೆಳಗಾವಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಮೆರವಣಿ ಗೆಗೆ ಚಾಲನೆ ನೀಡಿದರು.

ಗಣೇಶಪುರ ಗಲ್ಲಿಯ ಶ್ರೀ ಕಾಳಿಕಾದೇವಿ ಭಜನಾ ಮಂಡಳದಿಂದ ಭಜನೆ ಹಾಗೂ ರಾಜಪ್ರಭು ಧೋತ್ರೆ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ಪಾಟೀಲ ನಿರೂಪಿಸಿ, ವಂದಿಸಿದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಮಂಜುಗೌಡ ಪಾಟೀಲ ಬೆಳಗಾವಿ ಜಿಲ್ಲಾ ಹಣಬರ ಯಾದವ ಸಂಘದ ಅಧ್ಯಕ್ಷರಾದ ಶೀತಲ ಮುಂಡೆ ಹಾಗೂ ಸದಸ್ಯರು, ಹಣಬರ ಸಮಾಜದ ಮುಖಂಡರುಗಳು ಮತ್ತಿತರು ಉಪಸ್ಥಿತರಿದ್ದರು.

 

Read Entire Article