17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-ಬಹುಮಾನ ವಿತರಣೆ

khushihost
17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-ಬಹುಮಾನ ವಿತರಣೆ

ಬೆಳಗಾವಿ : ಕರ್ನಾಟಕವು ಕಲೆ, ಸಾಹಿತ್ಯದ ಜೊತೆ ಶಿಲ್ಪಕಲೆಯಲ್ಲೂ ಹೆಸರುವಾಸಿಯಾಗಿದೆ. ರಾಜ್ಯದಲ್ಲಿರುವ ದೇವಾಲಯಗಳು, ಗುಹಾಲಯಗಳು ಕಲಾಕೃತಿಗಳು ಶಿಲ್ಪಕಲೆಗೆ ನಿದರ್ಶನವಾಗಿದೆ. ಪ್ರಸ್ತುತ ಶಿಲ್ಪಕಲೆಯು ನಿಧಾನಗತಿಯಲಿದ್ದು, ಕರ್ನಾಟಕ ಸಾಹಿತ್ಯ ಸಂಸ್ಕೃತಿಯ ಜೊತೆ ಶಿಲ್ಪಕಲೆಯನ್ನು ಬೆಳೆಸಲು ನಾವೆಲ್ಲರೂ ಶ್ರಮಿಸೋಣ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ವೀರಣ್ಣಾ ಅರ್ಕಸಾಲಿ ಅವರು ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಆಶ್ರಯದಲ್ಲಿ ರವಿವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ 2021 ಗೌರವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಶಿಲ್ಪಕಲೆ ಯುಗ ಬೆಳೆದುಬಂದ ದಾರಿಯನ್ನು ಪ್ರಸ್ತುತ ಶಿಲ್ಪಕಲೆಯ ಸ್ಥಿತಿಗತಿ ವಿವರಿಸುತ್ತಾ, ತರಬೇತಿಗಳ ಮೂಲಕ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಬಾವಿ ಶಿಲ್ಪ ಕಲೆಗಾರರನ್ನು ಸೃಷ್ಠಿಸುವ ಕಾರ್ಯ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯ ಬಾಬುರಾವ್ ಹೆಚ್, ಉಡುಪಿ ಜಿಲ್ಲೆಯ ನರೇಶ್ ನಾಯ್ಕ, ಮೈಸೂರ ಜಿಲ್ಲೆಯ ಸುಮನ್ ಬಿ, ಎಸ್. ವೇಣುಗೋಪಾಲ್, ಶಿವಮೊಗ್ಗ ಜಿಲ್ಲೆಯ ಅಜೇಯ ಗಜಾನನ, ಬೆಂಗಳೂರಿನ ವಿನಯ್ ಕುಮಾರ್ ಎಸ್. , ವಿಜಯಪುರ ಜಿಲ್ಲೆಯ ಮೌನೇಶ ಆಚಾರ್ ಇವರಿಗೆ 17ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನವನ್ನು ನೀಡಲಾಯಿತು.

ಉಡುಪಿ ಜಿಲ್ಲೆಯ ರತ್ನಾಕರ ಎಸ್.ಗುಡಿಗಾರ, ಬಳ್ಳಾರಿ ಜಿಲ್ಲೆಯ ಡಾ.ಪಿ. ಮುನಿರತ್ನಾಚಾರಿ, ಬಾಗಲಕೋಟ ಜಿಲ್ಲೆಯ ನಾಗಲಿಂಗಪ್ಪ ಗಂಗಪ್ಪ ಗಂಗೂರ, ಕಲಬುರಗಿ ಜಿಲ್ಲೆಯ ಮಾನಯ್ಯ ನಾ.ಬಡಿಗೇರ, ಬೆಂಗಳೂರಿನ ಬಿ.ಸಿ.ಶಿವಕುಮಾರ ಇವರಿಗೆ 2021 ರ ಗೌರವ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟರ್ ಆರ್. ಚಂದ್ರಶೇಖರ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸ್ಥಾಪನೆಯಾಗಿ 25 ವರ್ಷ ಕಳೆದಿವೆ. ಅಕಾಡೆಮಿಯ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ, ವಿವಿಧ ಶಿಲ್ಪಿಗಳ ಪ್ರಶಸ್ತಿ ಪುರಸ್ಕಾರ ನೀಡಿ ಗೌವಿಸಲಾಗುವುದು.

ಪ್ರತಿ ವರ್ಷ 5 ಜನರಿಗೆ ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಪ್ರಶಸ್ತಿ ನೀಡುವುದು ನಮ್ಮ ಹೆಮ್ಮೆಯ ಸಂಗತಿ. ಮುಂದಿನ ಪೀಳಿಗೆ ನಮ್ಮ ಶಿಲ್ಪಕಲಾ ಸಂಸ್ಕೃತಿ ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಪ್ರೋತ್ಸಾಹ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ವಿವಿಧ ಲೋಹ, ಕಲ್ಲು, ಮಣ್ಣು ಸೇರಿದಂತೆ ವಿವಿಧ ಕಲಾಕೃತಿಯ ಶಿಲ್ಪಕಲಾ ವಸ್ತುಗಳನ್ನು ಪ್ರದರ್ಶಿಸಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಪ್ರೋ. ಮಾಲತಿ ಪಟ್ಟಣ್ಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಜಮಖಂಡಿ ಹಿರಿಯ ಕಲಾವಿದರಾದ ವಿಜಯ ಶಿಂಧೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮೈಸೂರ ರಾಮ ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಆರ್.ಜಿ.ಸಿಂಗ್, ಡಾ.ಸುನಂದಾ, ಮನೋಹರ ಕಾಳಪ್ಪ ಪತ್ತಾರ ಹಾಗೂ ಶಿಲ್ಪಕಲಾ ಪ್ರೇಮಿಗಳು ಉಪಸ್ಥಿತರಿದ್ದರು.

Share This Article