3 ಸೇತುವೆ ಮುಳುಗಡೆ; ಗೋಕಾಕ, ಮೂಡಲಗಿ ತಾಲೂಕಿನ ಜನರಿಗೆ ಎಚ್ಚರದಿಂದಿರಲು ಸೂಚನೆ

khushihost
3 ಸೇತುವೆ ಮುಳುಗಡೆ; ಗೋಕಾಕ, ಮೂಡಲಗಿ ತಾಲೂಕಿನ ಜನರಿಗೆ ಎಚ್ಚರದಿಂದಿರಲು ಸೂಚನೆ

ಬೆಳಗಾವಿ :  ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮುಸಲಧಾರೆ ಮಳೆಯಿಂದ ಬತ್ತಿ ಹೋಗಿದ್ದ ನದಿಗಳಿಗೆ ಜೀವ ಬಂದಿದ್ದು ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ಒಂದೇ ದಿನ 5 ಅಡಿ ನೀರು ಬಂದಿದೆ. 12 ವರುಷಗಳ ನಂತರ ಸಂಪೂರ್ಣವಾಗಿ ಗೋಚರವಾಗಿ ಸುಮಾರು ಎರಡು ವಾರ ಕಾಲ ಭಕ್ತರಿಂದ ಪೂಜೆ ನಡೆದಿದ್ದ ವಿಠ್ಠಲ ಮಂದಿರ ಜಲಾಶಯದಲ್ಲಿ ಪುನಃ ಮುಳುಗಿದೆ.

ಜಲಾಶಯದ ನೀರಿನ ಮಟ್ಟದ ಕುರಿತು ಸಹಾಯಕ ಮುಖ್ಯ ಅಭಿಯಂತ (ಎಇಇ) ಎಸ್ ಎಂ ಮಾಡಿವಾಲೆ ಅವರು ಸಮದರ್ಶಿಗೆ ಮಾಹಿತಿ ನೀಡಿದರು “ಜಲಾಶಯದ ನೀರಿನ ಮಟ್ಟ ಇಂದು ಮುಂಜಾನೆ ದಾಖಲಾದಂತೆ 2104.1 ಅಡಿ ಇದೆ. ನಿನ್ನೆ ಬುಧವಾರ ನೀರು 2098.8 ಆಡಿಯಿತ್ತು. ಗುರುವಾರದ ವರೆಗೆ ಒಟ್ಟು 5 ಅಡಿ ನೀರು ಸಂಗ್ರಹವಾಗಿದೆ. ಮಲಪ್ರಭಾ ಮತ್ತು ಮಾರ್ಕಂಡೇಯ ನದಿ ಪಾತ್ರದ ಖಾನಾಪುರ ಮತ್ತು ಬೆಳಗಾವಿ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು. 1977 ರಲ್ಲಿ ನಿರ್ಮಾಣಗೊಂಡಿರುವ ಜಲಾಶಯದ ಒಟ್ಟು ಸಾಮರ್ಥ್ಯ 51-ಟಿಎಂಸಿ ಅಡಿ ಇದೆ.

ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನಲ್ಲಿ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಜತ್ರಾಟ-ಬಿವಂಶಿ ಮತ್ತು ಕಾಗವಾಡ ತಾಲ್ಲೂಕಿನ ರಾಜಾಪುರ-ಮಂಗಾವತಿ ಸೇತುವೆಗಳು ಮುಳುಗಿವೆ. ಘಟಪ್ರಭಾ ನದಿ ಪಾತ್ರದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಗೋಕಾಕ ತಾಲ್ಲೂಕಿನ ಶಿಂಗಳಾಪುರ-ಗೋಕಾಕ ಸೇತುವೆಯ ಮೇಲೆ ಸುಮಾರು ಒಂದು ಅಡಿ ಎತ್ತರಕ್ಕೆ ನೀರು ಹರಿಯುತ್ತಿದೆ.

ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ಘಟಪ್ರಭಾ ನದಿ ದಂಡೆ ವಾಸವಾಗಿರುವ ಗ್ರಾಮಸ್ಥರು ಎಚ್ಚರವಾಗಿರಲು ಸೂಚಿಸಲಾಗಿದೆ.

ಜಿಲ್ಲಾ ಪೊಲೀಸ್ ಇಲಾಖೆ ನಾಗರಿಕರಲ್ಲಿ ವಿನಂತಿ ಮಾಡಿಕೊಂಡಿದ್ದು, ರಸ್ತೆ, ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದರೆ ದಾಟುವ ಯತ್ನ ಮಾಡಬೇಡಿ ಎಂದಿದೆ. ಅಲ್ಲದೇ ಪೊಲೀಸ್ ವರಿಷ್ಟಧಿಕಾರಿ ಸಂಜೀವ ಪಾಟೀಲ ಅವರು ಜಿಲ್ಲೆಯಲ್ಲಿ 84 ಸೇತುವೆಗಳನ್ನು ಗುರುತಿಸಿ ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಿದ್ದು 24 ಗಂಟೆ ಪೊಲೀಸ್ ಬಂದೋಬಸ್ತ ಏರ್ಪಡಿಸಿದ್ದಾರೆ.

Share This Article