ನಾಲ್ಕನೇ ದಿನವೂ ಸತತ ಮಳೆ; ಸಂಪರ್ಕ ಕಳೆದುಕೊಂಡ 50 ಗ್ರಾಮಗಳು

khushihost
ನಾಲ್ಕನೇ ದಿನವೂ ಸತತ ಮಳೆ; ಸಂಪರ್ಕ ಕಳೆದುಕೊಂಡ 50 ಗ್ರಾಮಗಳು

ಬೆಳಗಾವಿ : ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಶ್ಚಿಮ ಘಟ್ಟದ ಅಂಚಿನಲ್ಲಿ ಬರುವ ಖಾನಾಪುರ ತಾಲೂಕಿನ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸುಮಾರು 50 ಗ್ರಾಮಗಳು ಮುಖ್ಯ ಪಟ್ಟಣಗಳೊಂದಿಗೆ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಕಡಿಮೆ ಎತ್ತರದ ರಸ್ತೆ ಸೇತುವೆಗಳ ಮೇಲೆ ಸುಮಾರು 5 ಅಡಿಗಳ ವರೆಗೆ ನೀರು ಹರಿಯುತ್ತಿದೆ.

ತಾಲೂಕಿನ ಹಬ್ಬಾನಟ್ಟಿ ಗ್ರಾಮದ ಆಂಜನೇಯ ಮತ್ತು ಇಟಗಿ ಗ್ರಾಮದ ಮರಳು ಶಂಕರ ದೇವಸ್ಥಾನಗಳು ಜಲಾವೃತಗೊಂಡಿವೆ.

ಖಾನಾಪುರ ತಾಲ್ಲೂಕಿನಲ್ಲಿ ಹುಟ್ಟಿರುವ ಮಲಪ್ರಭಾ, ಪಾಂಡರಿ ಮತ್ತು ಮಹದಾಯಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ನಾಗರಗಾಳಿ, ಗುಂಜಿ, ಲೋಂಡಾ, ಹೆಮ್ಮಡಗಾ, ನೆರಸೆ, ನೀಲಾವಡೆ, ಜಂಬೋಟಿ, ಕಣಕುಂಬಿ ಮುಂತಾದ ಪ್ರಮುಖ ಗ್ರಾಮಗಳು ಸೇರಿದಂತೆ ಸುಮಾರು 50 ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದು ಹತ್ತಾರು ಬೃಹತ್ ಮರಗಳು ಉರುಳಿ ಬಿದ್ದಿದ್ದು ಅವುಗಳನ್ನು ತೆರವುಗೊಳಿಸಲು ಅಡ್ಡಿಯಾಗುತ್ತಿದೆ.

ಪ್ರಮುಖ ನದಿಗಳಲ್ಲದೇ ಕಳಸಾ-ಬಂಡೂರಿ, ಕೊಟ್ನಿ, ಮಂಗತ್ರಿ, ಪಣಸೇರಿ, ತಟ್ಟಿ, ಕುಂಬಾರ, ಬೈಲ್ ಮುಂತಾದ ಹಳ್ಳಗಳಲ್ಲಿ ನೀರಿನ ಒಳಹರಿವು ಹೆಚ್ಚಿದೆ.

ಮಂಗಳವಾರ ಸಂಜೆಯವರೆಗೆ ಕಣಕುಂಬಿಯಲ್ಲಿ 7.8 ಸೆಮಿ, ಲೋಂಡಾ 3.6, ಗುಂಜಿ 5.3, ಜಂಬೋಟಿ 4.5, ಅಸೊಗಾದಲ್ಲಿ 3.3 ಸೆಮೀ ಮಳೆ ದಾಖಲಾಗಿದೆ. ಈಗ ಆಗುತ್ತಿರುವ ಮಳೆ ಭತ್ತ, ರಾಗಿ, ಗೆಣಸು, ಆಲೂಗಡ್ಡೆ ಬೆಳೆಗಳಿಗೆ ಅನುಕೂಲವಾಗಿದೆ.

ಮಂಗಳವಾರ ಸಂಜೆ ಬೆಳಗಾವಿ-ಪಣಜಿ ರಸ್ತೆ ಮೇಲೆ ಬೃಹತ್ ಗಾತ್ರದ ಮರವುರುಳಿ ರಸ್ತೆ ಸಂಚಾರ ಸುಮಾರು ಎರಡು ತಾಸು ಸ್ಥಗಿತಗೊಂಡಿತ್ತು.

Share This Article