ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬಿಜೆಪಿ ಸಚಿವ, ಶಾಸಕರ ಮನವಿ

khushihost
ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬಿಜೆಪಿ ಸಚಿವ, ಶಾಸಕರ ಮನವಿ

ಬೆಳಗಾವಿ, ೨೩- ರಾಜ್ಯದಲ್ಲಿ ವಿವಿಧ ಸಮುದಾಯಗಳಿಂದ ಮೀಸಲಾತಿಗಾಗಿ ಬೇಡಿಕೆಗಳು ದಿನೇ ದಿನೇ ಹೆಚ್ಚಾಗುತ್ತಿವೆ.  ನಿನ್ನೆ ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆಯ ನಂತರ ಇಂದು ಶುಕ್ರವಾರ ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗದಿಂದ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಸಚಿವರಾದ ಆರ್ ಅಶೋಕ, ಡಾ. ಸಿ. ಎನ್ ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್ ಟಿ ಸೋಮಶೇಖರ, ಸುಧಾಕರ, ಡಾ.ನಾರಾಯಣಗೌಡ ಹಾಗೂ ಶಾಸಕರು ಇದ್ದರು.

ಮನವಿ ಕೊಟ್ಟ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ ಅವರು,  ಒಕ್ಕಲಿಗ ಸಮುದಾಯದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನೀಡಿರುವ ಮೀಸಲಾತಿ ಕಡಿಮೆ ಇದ್ದು ಮೀಸಲಾತಿ ಹೆಚ್ಚಳಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ನಾವು ಹೆಚ್ಚು ಮೀಸಲಾತಿ ಕೇಳುತ್ತಿಲ್ಲ, ಜನಸಂಖ್ಯೆಗೆ ತಕ್ಕಂತೆ ಮಾತ್ರ ನೀಡಲು ಕೋರಲಾಗಿದೆ. ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಗಳ ಅಗತ್ಯವೇನು ಎಂಬುದನ್ನು ಅರಿತಿದ್ದಾರೆ. ಅವರು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲಿದ್ದಾರೆ ಎಂದರು.

ಒಕ್ಕಲಿಗ ಸಮುದಾಯದ ಜನಸಂಖ್ಯೆಗೆ ಹೋಲಿಸಿದರೆ ಶಿಕ್ಷಣ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ನೀಡಿರುವ ಮೀಸಲಾತಿ ಸಾಲುವುದಿಲ್ಲ. ಒಕ್ಕಲಿಗರಲ್ಲಿ ಬಹುತೇಕರು ರೈತರಾಗಿದ್ದು, ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಇದಕ್ಕಾಗಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ವಹಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

Share This Article