ರಮೇಶ ಜಾರಕಿಹೊಳಿ, ನಡ್ಡಾ, ಬೊಮ್ಮಾಯಿ ವಿರುದ್ಧ ಪೋಲೀಸರಿಗೆ ದೂರು ನೀಡಿದ ಕಾಂಗ್ರೆಸ್

khushihost
ರಮೇಶ ಜಾರಕಿಹೊಳಿ, ನಡ್ಡಾ, ಬೊಮ್ಮಾಯಿ ವಿರುದ್ಧ ಪೋಲೀಸರಿಗೆ ದೂರು ನೀಡಿದ ಕಾಂಗ್ರೆಸ್

ಬೆಂಗಳೂರು ಮತದಾರರನ್ನು ಸೆಳೆಯುವ ಉದ್ದೇಶದಿಂದ ಲಂಚದ ಆಮಿಷವೊಡ್ಡಿರುವ ಆರೋಪದ ಮೇಲೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ ದೂರಿನ ಪತ್ರಕ್ಕೆ ಸಹಿ ಹಾಕಿದ್ದು, ತಮ್ಮ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ

ಗೋಕಾಕ ಬಿಜೆಪಿ ಶಾಸಕ ಜಾರಕಿಹೊಳಿ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮತಕ್ಕೆ 6,000 ರೂಪಾಯಿ ನೀಡುವುದಾಗಿ ಇದೇ ಜನವರಿ 22  ರಂದು ಸಾರ್ವಜನಿಕವಾಗಿ ಹೇಳಿದ್ದರು. ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ರಮೇಶ ಜಾರಕಿಹೊಳಿ ಅವರು, ಹಾಲಿ ಕಾಂಗ್ರೆಸ್ ಶಾಸಕರು 3,000 ರೂಪಾಯಿ ಮೌಲ್ಯದ ಉಡುಗೊರೆ ಹಾಗೂ ನಗದುಗಳನ್ನು ನೀಡಿದರೆ, ನಾನು ಮತದಾರರಿಗೆ 6,000 ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದ್ದರು. ಜಾರಕಿಹೊಳಿ ಅವರ ಹೇಳಿಕೆಯಿಂದ ಬಿಜೆಪಿಯೇನೋ ಅಂತರ ಕಾಯ್ದುಕೊಂಡಿದೆಯಾದರೂ ಜಾರಕಿಹೊಳಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಪ್ರಕರಣ ದಾಖಲಿಸಿದೆ. ರಮೇಶ ಜಾರಕಿಹೊಳಿ ಅವರ ಈ ಹೇಳಿಕೆ ಕ್ಯಾಮರಾದಲ್ಲೂ ಸೆರೆಯಾಗಿದೆ ಎಂದು ಹೈ ಗ್ರೌಂಡ್ಸ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಕಾಂಗ್ರೆಸ್ ಹೇಳಿದೆ.

ಇದು ಬಿಜೆಪಿ ವರಿಷ್ಠರೇ ರೂಪಿಸಿರುವ ಪಿತೂರಿಯಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಅವರೂ ಪಿತೂರಿಯಲ್ಲಿ ಭಾಗವಹಿಸಿದ್ದಾರೆ. ಹೇಳಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರೇ ಇದ್ದು ಇದು ಮತದಾರರನ್ನು ಭ್ರಷ್ಟಗೊಳಿಸುವ ಸಂಘಟಿತ ವಿನ್ಯಾಸ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯ ಕೃತ್ಯ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವುದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, 1860 ಐಸಿಸಿಯ ಸೆಕ್ಷನ್ 171ಬಿ, 107, 120 B, 506   ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಇದು 1951 ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 123 (1) ಪ್ರಕಾರ ಮತದಾರರಿಗೆ ಲಂಚದ ಆಮಿಷವೊಡ್ಡುವುದಾಗಿದೆ ಎಂದು ಹೇಳಿದೆ.

ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು ಬಿಜೆಪಿ ನಾಯಕರು 30,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಈ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ

Share This Article