ವಿವಾದ ಸೃಷ್ಟಿಸಿರುವ ಬಿಜೆಪಿ ನಾಯಕರ ಹೇಳಿಕೆಗಳು

khushihost
ವಿವಾದ ಸೃಷ್ಟಿಸಿರುವ ಬಿಜೆಪಿ ನಾಯಕರ ಹೇಳಿಕೆಗಳು

ಬೆಂಗಳೂರು, ಮಾರ್ಚ 17: ಲಿಂಗಾಯತರ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ  ಮಾತನಾಡಿದ್ದು ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇರುವಾಗ ಸಿಟಿ ರವಿ ನೀಡಿದ್ದಾರೆ ಎನ್ನಲಾದ ಹೇಳಿಕೆಯು ಲಿಂಗಾಯತ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿದೆ.

ಸಿಟಿ ರವಿ ಕ್ಷಮೆಯಾಚಿಸದೇ ಹೋದರೆ, ಅವರು ಪ್ರಚಾರಕ್ಕೆ ತೆರಳುವ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಲಿಂಗಾಯತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಬಿಜೆಪಿಯಿಂದ ಲಿಂಗಾಯತ ಸಮುದಾಯ ದೂರು ಸರಿಯುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಹಾಗೂ ಅವರ ತಂಡದವರೂ ಬಿಜೆಪಿ ಕೇಂದ್ರ ನಾಯಕರ ಮಾತುಗಳನ್ನು ಕೇಳಲೇಬೇಕು ಎಂದು ಸಿಟಿ ರವಿ ಹೇಳಿದ್ದಾರೆಂದು ವರದಿಯಾಗಿದೆ.

ಸಿಟಿ ರವಿ ಅವರ ಹೇಳಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕೇಳಿದಾಗ, ರವಿ ಅವರನ್ನು ಕರೆದು ಮಾತನಾಡುತ್ತೇನೆ. ಸಮುದಾಯವೊಂದರ ಬಗ್ಗೆ ಹೀಗೆ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ. ಮಂಗಳವಾರ ಮಾತನಾಡಿದ್ದ ಸಿ ಟಿ ರವಿ, ‘ಯಡಿಯೂರಪ್ಪ ಅವರು ಚುನಾವಣಾ ಸ್ಪರ್ಧೆಯಿಂದ ಹೊರಗುಳಿದ ನಂತರ ಶಿಕಾರಿಪುರ ಸ್ಥಾನವು ತೆರವಾಗಿದೆ. ಅಲ್ಲಿ ವಿಜಯೇಂದ್ರ ಸ್ಪರ್ಧಿಸುವ ನಿರ್ಧಾರ ಯಾರೊಬ್ಬರ ಅಡುಗೆ ಮನೆಯಲ್ಲಿ ನಿರ್ಧಾರವಾಗುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಒಂದು ವಿಷಯ ನೆನಪಿಟ್ಟುಕೊಳ್ಳಿ. ಅಭ್ಯರ್ಥಿಗಳ ನಿರ್ಧಾರ ಯಾರ ಅಡುಗೆ ಮನೆಯಲ್ಲಿಯೂ ಆಗುವುದಿಲ್ಲ. ಯಾರೋ ಒಬ್ಬರ ಮಗ ಎಂಬ ಕಾರಣಕ್ಕೆ ಯಾರಿಗೂ ಟಿಕೆಟ್ ಸಿಗುವುದಿಲ್ಲ. ಆಕಾಂಕ್ಷಿಗಳ ಮನೆಯಲ್ಲಿಯೂ ಟಿಕೆಟ್ ನಿರ್ಧಾರ ಆಗುವುದಿಲ್ಲ. ವಿಜಯೇಂದ್ರ ಅವರ ಆಕಾಂಕ್ಷೆ ಬಗ್ಗೆ ಸಂಸದೀಯ ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಯಾವುದೇ ಅಡುಗೆಮನೆಯಲ್ಲಿ ಇದನ್ನು ನಿರ್ಧರಿಸಲಾಗುವುದಿಲ್ಲ. ಸಮೀಕ್ಷೆಗಳನ್ನು ವಿಶ್ಲೇಷಿಸಿದ ನಂತರ ಅಭ್ಯರ್ಥಿಯ ಗೆಲುವಿನ ಆಧಾರದ ಮೇಲೆ ಪಕ್ಷವು ಇದನ್ನು ನಿರ್ಧರಿಸುತ್ತದೆ. ಆ ಸಮೀಕ್ಷೆಗಳು ನಾಯಕರ ಅಡುಗೆ ಮನೆಯಲ್ಲಿ ನಡೆಯುವುದಿಲ್ಲ’ ಎಂದು ಸಿಟಿ ರವಿ ಹೇಳಿದ್ದಾರೆ.

ವಿಜಯೇಂದ್ರ ಅವರ ಪಾತ್ರವನ್ನು ರಾಜ್ಯ ವಸತಿ ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ ಸೋಮಣ್ಣ ಕೂಡ ಪ್ರಶ್ನಿಸಿದ್ದಾರೆ. ‘ನಮ್ಮ ಪಕ್ಷದಲ್ಲಿ ತನ್ನ ಮಗನಿಗಾಗಿ ಸ್ವಂತ ಸ್ಥಾನವನ್ನು ತ್ಯಾಗ ಮಾಡಿದ ದೊಡ್ಡ ನಾಯಕನಿದ್ದಾನೆ. ಅವರ ಮಗ ರಾಜ್ಯದ ಮುಂದಿನ ದೊಡ್ಡ ನಾಯಕ ಎಂದು ಹೇಳಿಕೊಂಡು ಕರ್ನಾಟಕ ಸುತ್ತುತ್ತಿದ್ದಾನೆ. ನಾನು ಅವನಿಗೆ ಕರೆ ಮಾಡಿದೆ. ಅವನು ನನ್ನನ್ನು ನಿಂದಿಸಲು ಪ್ರಾರಂಭಿಸಿದ. ನಾನು ನಿನ್ನ ರೀತಿಯಲ್ಲಿಯೂ ಮಾತನಾಡಬಲ್ಲೆ ಎಂದು ಹೇಳಿದೆ’ ಎಂಬುದಾಗಿ ಅರುಣ ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

Share This Article