ಕರ್ನಾಟಕದಲ್ಲಿ ಮತದಾನ; ಗೋವಾದಲ್ಲಿ ವೇತನಸಹಿತ ರಜೆ ಘೋಷಿಸಿದ ಸರ್ಕಾರ

khushihost
ಕರ್ನಾಟಕದಲ್ಲಿ ಮತದಾನ; ಗೋವಾದಲ್ಲಿ ವೇತನಸಹಿತ ರಜೆ ಘೋಷಿಸಿದ ಸರ್ಕಾರ

ಪಣಜಿ : ಕರ್ನಾಟಕದಲ್ಲಿ ದಿ.10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಅನುಕೂಲವಾಗುವಂತೆ ಗೋವಾದ ಬಿಜೆಪಿ ಸರ್ಕಾರವು ಖಾಸಗಿ ಸಂಸ್ಥೆಗಳು ಮತ್ತು ಕೈಗಾರಿಕಾ ಕಾರ್ಮಿಕರಿಗೆ ಮೇ 10 ರಂದು ವೇತನ ಸಹಿತ ರಜೆ ಘೋಷಿಸಿದೆ.

ಪ್ರಮೋದ ಸಾವಂತ ಸರ್ಕಾರದ ಈ ನಿರ್ಧಾರಕ್ಕೆ ಗೋವಾದ ವಿರೋಧ ಪಕ್ಷಗಳು ಮತ್ತು ಉದ್ಯಮ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘವು ರಜೆಯ ವಿರುದ್ಧ ಕಾನೂನು ಮೊರೆ ಹೋಗಬೇಕಾಗಬಹುದು ಎಂದು ಹೇಳಿದೆ. ಆದರೆ, ನೆರೆಯ ರಾಜ್ಯಗಳಲ್ಲಿ ಚುನಾವಣೆ ಇದ್ದಾಗ ರಜೆ ನೀಡುವುದು ವಾಡಿಕೆ ಎಂದು ಗೋವಾ ಮುಖ್ಯಮಂತ್ರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಗೋವಾದಲ್ಲಿ ನಡೆದ ಮತದಾನದ ದಿನದಂದು ಕರ್ನಾಟಕದಲ್ಲಿ ರಜೆ ಘೋಷಿಸಲಾಗಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ವೇತನ ಸಹಿತ ರಜೆ ಎಂದು ಗೋವಾ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಸರ್ಕಾರಿ ನೌಕರರು ಮತ್ತು ಕೈಗಾರಿಕಾ ಕಾರ್ಮಿಕರು ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ರಜೆಯನ್ನು ವಿಸ್ತರಿಸಲಾಗಿದೆ ಎಂದು ಅದು ಹೇಳಿದೆ. ಗೋವಾ ರಾಜ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ದಾಮೋದರ ಕೋಚಕರ ರಾಜ್ಯ ಸರ್ಕಾರದ “ಅಸಂಬದ್ಧ” ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದಾರೆ. “ಗೋವಾದ ಕೈಗಾರಿಕೆಗಳು ಇದು ಸಂಪೂರ್ಣವಾಗಿ ಅಸಂಬದ್ಧ ನಿರ್ಧಾರವೆಂದು ಭಾವಿಸುತ್ತದೆ ಎಂದು ಕೋಚರ ಆರೋಪಿಸಿದರು. ರಾಜ್ಯ ಸರ್ಕಾರದ ಇಂತಹ “ಏಕಪಕ್ಷೀಯ” ನಿರ್ಧಾರಗಳ ವಿರುದ್ಧ ಕಾನೂನು ಕ್ರಮಗಳನ್ನು ಪರಿಗಣಿಸುವುದಾಗಿ ಅವರು ಹೇಳಿದರು.

ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ ಪಾಲೇಕರ ಕೂಡ ʼಈ ನಿರ್ಧಾರ”ದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟ, ಗದಗ ಆದಿ ಜಿಲ್ಲೆಗಳ ಲಕ್ಷಾಂತರ ಕಾರ್ಮಿಕರು ಕೆಲಸ ಅರಸಿ ಗೋವಾದಲ್ಲಿ ನೆಲೆಸಿದ್ದಾರೆ.

 

Share This Article