ಕಾಂಗ್ರೆಸ್ ವಲಸಿಗರಿಂದ ಬಿಜೆಪಿಯಲ್ಲಿ ಅಶಿಸ್ತು -ಈಶ್ವರಪ್ಪ

khushihost
ಕಾಂಗ್ರೆಸ್ ವಲಸಿಗರಿಂದ ಬಿಜೆಪಿಯಲ್ಲಿ ಅಶಿಸ್ತು -ಈಶ್ವರಪ್ಪ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಲಸಿಗರು ಬಂದ ನಂತರ ಪಕ್ಷದಲ್ಲಿ ಅಶಿಸ್ತು ಮೂಡಿದ್ದು, ಅಶಿಸ್ತು ತೋರುವವರ ಬಾಲವನ್ನು ಕತ್ತರಿಸುತ್ತೇವೆ ಎಂದು ಸದಾ ವಿವಾದಿತ ಹೇಳಿಕೆ ನೀಡುವ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರುವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಪರೇಷನ್ ಕಮಲ ಮುಳುವಾಯಿತು ಕಾಂಗ್ರೆಸ್ ನಾಯಕರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿರುವುದಕ್ಕೆ ಸಮಸ್ಯೆ ಅನುಭವಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲವನ್ನು ಟೀಕಿಸಿದರು. ಬಿಜೆಪಿ ಪಕ್ಷದಲ್ಲಿ ಶಿಸ್ತು ಕಳೆದು ಹೋಗಿದೆ. ಕಾಂಗ್ರೆಸ್ಗಾಳಿ ಸೋಕಿರುವುದೇ ಇದಕ್ಕೆ ಕಾರಣ. ಬಹಿರಂಗವಾಗಿ ಅಡ್ಜೆಸ್ಟ್ಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಇಂತಹದ್ದೆನ್ನಲ್ಲ ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡಬೇಕು. ಬಹಿರಂಗ ಹೇಳಿಕೆ ಕೊಡುವ ಬಗ್ಗೆ ಪಕ್ಷದ ನಾಯಕರೊಂದಿಗೆ ನಾನು ಮಾತನಾಡುತ್ತೇನೆ ಎಂದರು.

ಮೋಸ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿದ್ದ ಐದು ಗ್ಯಾರಂಟಿಗಳ ಬಗ್ಗೆ ಈ ವರೆಗೂ ಗೊಂದಲ ಬಗೆಹರಿದಿಲ್ಲ. ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತೇವೆ ಎನ್ನುತ್ತಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವಂತ ಕೆಲಸ ಮಾಡುತ್ತಿದೆ ಎಂದು ಈಶ್ವರಪ್ಪ ಕಿಡಿಕಾರಿದರು.

ಸರ್ಕಾರದ ಗ್ಯಾರಂಟಿ ಭರವಸೆಗಳ ವಿರುದ್ಧ ರಾಜ್ಯದ ಜನ ಆಕ್ರೋಶಗೊಂಡಿದ್ದಾರೆ. ಮಹಿಳೆಯರಿಗೆ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಹಣ ಯಾವ ರೀತಿ ಹೊಂದಿಸುತ್ತಾರೆ ಎಂದು ಈ ವರೆಗೂ ಸ್ಪಷ್ಟಪಡಿಸಿಲ್ಲ. ಕಾಂಗ್ರೆಸ್ ಸರ್ಕಾರದ ನ್ಯೂನತೆಗಳ ವಿರುದ್ಧ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ. ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸರ್ಕಾರ ಸ್ಪಷ್ಟನೆ ನೀಡಬೇಕು. ಮತಾಂತರ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ನಾವು ಜಾರಿ ಮಾಡಿದ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ಹೊರಟಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ ಕಾರ್ಯಕರ್ತರು ನಿರಾಶೆಯಲ್ಲಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಾಗುತ್ತಿದೆ. ಮೂಲಕ ಲೋಕಸಭೆ ಚುನಾವಣೆಗೆ ಬಿಜೆಪಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದರು.

Share This Article