ವಿವಾಹ ಭೋಜನದಿಂದ ಅಸ್ವಸ್ಥ ವ್ಯಕ್ತಿಯ ದೃಷ್ಟಿ ನಾಶ

khushihost
ವಿವಾಹ ಭೋಜನದಿಂದ ಅಸ್ವಸ್ಥ ವ್ಯಕ್ತಿಯ ದೃಷ್ಟಿ ನಾಶ

ಚಿಕ್ಕೋಡಿ, ೧- ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಕಳೆದ ಮಂಗಳವಾರ ಜರುಗಿದ ವಿವಾಹದ ಭೋಜನ ಮಾಡಿ ಅಸ್ವಸ್ಥರಾಗಿದವರಲ್ಲಿ ಒಬ್ಬರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ.

ಪಟೇಲ ಎಂಬವರ ಕುಟುಂಬದಲ್ಲಿ ಆಮಂತ್ರಿತರಿಗೆ ರಾತ್ರಿ ಮಾಂಸಹಾರಿ ಭೋಜನ ನೀಡಲಾಗಿತ್ತು. ಇದನ್ನು ಸೇವಿಸಿದ್ದ ಮಕ್ಕಳು ಮಹಿಳೆಯರೂ ಸೇರಿದಂತೆ ನೂರಾರು ಜನ ವಾಂತಿ, ಭೇದಿಯಿಂದ ಬಳಲಿ ಚಿಕ್ಕೋಡಿ, ಹಿರೇಕೋಡಿ ಮತ್ತು ಮಹಾರಾಷ್ಟ್ರದ ಮಿರಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

ಆದರೆ 32 ವರುಷದ ಬಾಬಾಸಾಹೇಬ ಬೇಗ್ ಎಂಬವರು ವಾಂತಿ ಬೇಧಿಗೊಳಗಾಗಿ ತೀವ್ರ ನಿತ್ರಾಣಗೊಂಡಿದ್ದರು. ಚಿಕ್ಕೋಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಿರಜ್ ಆಸ್ಪತ್ರೆಗೆ ದಾಖಲಾಗಲು ಸೂಚಿಸಲಾಗಿತ್ತು. ಆದರೆ ಅವರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಗುರುವಾರದಿಂದ ಅವರಿಗೆ ಕಣ್ಣು ಕಾಣುತ್ತಿಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ವಾಂತಿ ಯಿಂದ ಅವರು ತೀವ್ರವಾಗಿ ನಿತ್ರಾಣಗೊಂಡಿರುವುದರಿಂದ ಅವರ ರಕ್ತದಲ್ಲಿ ನೀರಿನ ಅಂಶ ಕಡಿಮೆಯಾಗಿ ಮಿದುಳಿಗೆ ಎಷ್ಟು ಬೇಕೋ ಅಷ್ಟು ಸರಬರಾಜಾಗುತ್ತಿಲ್ಲ. ಹೀಗಾಗಿ ಅವರ ದೃಷ್ಟಿಗೆ ತೊಂದರೆಯಾಗಿದೆ. ಎಂಆರ್ ಆಯ್ ಸ್ಕ್ಯಾನ್ ಮಾಡಿದ ನಂತರ ದೃಷ್ಟಿಹರಣಕ್ಕೆ ಕಾರಣ ತಿಳಿದು ಬರಲಿದೆ ಎಂದು ತಿಳಿಸಿದ್ದಾರೆ.

Share This Article