ವಿದ್ಯುತ್ ಅವಘಡ : ತಂದೆ, ಪುತ್ರನ ಸಾವು

khushihost
ವಿದ್ಯುತ್ ಅವಘಡ : ತಂದೆ, ಪುತ್ರನ ಸಾವು

ಬೈಲಹೊಂಗಲ, 1-  ಮನೆ ಮುಂದಿನ ಕಸ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗ ದಾರುಣವಾಗಿ ಅಸುನೀಗಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಉಡಕೇರಿ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

71 ವರ್ಷದ ಪ್ರಭಾಕರ ಹುಂಬಿ ಮತ್ತು 31 ವರ್ಷದ ಅವರ ಮಗ ಮಂಜುನಾಥ ಹುಂಬಿ ಮೃತಪಟ್ಟವರು. ಪ್ರಭಾಕರ ಬೆಳಿಗ್ಗೆ ದನದ ಕೊಟ್ಟಿಗೆಗೆ ಹೋಗಿ ಆಕಳಿಗೆ ಹುಲ್ಲು ನೀಡಿದ್ದಾರೆ. ನಂತರ ಮನೆಯ ಮುಂದಿನ ಜಾಗದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾಗ ವಿದ್ಯುತ್ ಕಂಬಕ್ಕೆ ಸಪೋರ್ಟ ಆಗಿ ನಿಲ್ಲಿಸಿದ್ದ ಕಂಬವನ್ನು ಸ್ಪರ್ಶಿಸಿದ್ದಾರೆ. ಆ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು.

ಗುರುವಾರ ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ಕಂಬಕ್ಕೆ ಸಪೋರ್ಟ ಆಗಿ ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.  ಬೆಳಿಗ್ಗೆ ಎದ್ದು ಮನೆಯ ಮುಂದೆ ಬೆಳೆದಿದ್ದ ಹುಲ್ಲು ಕೀಳುವಾಗ ತಂದೆ ಶಾಕ್ ಹೊಡೆದು ಪಕ್ಕದ ಕಾಲುವೆಯಲ್ಲಿ ಬಿದ್ದು ಒದ್ದಾಡುವಾಗ ಫಿಟ್ಸ ಬಂದಿರಬಹುದು ಎಂದು ಓಡಿ ಬಂದ ಮಗ ಅದೇ ತಂತಿ ಹಿಡಿದು ತಂದೆಯನ್ನು ಮೇಲಕ್ಕೆ ಎಬ್ಬಿಸಲು ಹೋಗಿ ಆತನೂ ಪ್ರಾಣ ಬಿಟ್ಟಿದ್ದಾನೆ. ಪ್ರಭಾಕರ ಸ್ಥಳದಲ್ಲೇ ಮೃತರಾದರೆ ಮಗ ಮಂಜುನಾಥ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪೊಲೀಸ ವರಿಷ್ಠ ಸಂಜೀವ ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದರು. ಇಲ್ಲಿ ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ ಎದ್ದು ಕಾಣುತ್ತದೆ. ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊಣೆ ಮಾಡಿ ದೂರು ದಾಖಲಿಸಿಕೊಳ್ಳುವಂತೆ ಸ್ಥಳದಲ್ಲಿದ್ದ ಸಿಪಿಐಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಶಾಸಕರೊಂದಿಗೆ ಮಾತನಾಡಿದ್ದು, ಸಂತ್ರಸ್ತ ಕುಟುಂಬಕ್ಕೆ ಸರಕಾರದ ಸಹಾಯ ಒದಗಿಸಲು ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ಹೆಸ್ಕಾಂನ ಒಂದು ತಂಡ ಗ್ರಾಮಕ್ಕೆ ಬರಲಿದ್ದು, ಜೋತು ಬಿದ್ದ ತಂತಿಗಳನ್ನು ಕಟ್ ಮಾಡಿ ಸರಿಪಡಿಸಲಿದ್ದಾರೆ. ಗ್ರಾಮದಲ್ಲಿ ಎಲ್ಲ ಕಡೆಗಳಲ್ಲಿ ವಿದ್ಯುತ್  ತಂತಿಗಳ ದುರಸ್ತಿ ಮಾಡಲಿದ್ದಾರೆ ಎಂದರು.

Share This Article