ತಿರುಪತಿಯಿಂದ ಮರಳುತ್ತಿದ್ದ ಕ್ರೂಸರ್‌ ಗೆ ಲಾರಿ ಡಿಕ್ಕಿ; ಬೆಳಗಾವಿ ಜಿಲ್ಲೆಯ ಐವರ ಸಾವು

khushihost
ತಿರುಪತಿಯಿಂದ ಮರಳುತ್ತಿದ್ದ ಕ್ರೂಸರ್‌ ಗೆ ಲಾರಿ ಡಿಕ್ಕಿ; ಬೆಳಗಾವಿ ಜಿಲ್ಲೆಯ ಐವರ ಸಾವು

ತಿರುಪತಿ, ೧೫ : ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಬರುತ್ತಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಐವರು ಭಕ್ತರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಆಂಧ್ರಪ್ರದೇಶದ ತಿರುಪತಿಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಡಚಿ ಗ್ರಾಮದ ಐವರು ಭಕ್ತರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಶುಕ್ರವಾರ ನಸುಕಿನ ಜಾವ 3.30ಕ್ಕೆ ಆಂಧ್ರದ ಅಣ್ಣಮಯ್ಯ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ 16 ಜನರು ಪ್ರಯಾಣಿಸುತ್ತಿದ್ದರು.

ಡಿಕ್ಕಿಯ ರಭಸಕ್ಕೆ ಲಾರಿ ಮುಂದಿನ ಭಾಗ ನಜ್ಜುಗುಜ್ಜಾಗಿದ್ದರೆ, ಕ್ರೂಸರ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಮೃತರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ. ಮೃತರನ್ನು ಹಣಮಂತ ನಿಂಗಪ್ಪ ಅಜೂರ (40), ಮಹಾನಂದ ಹಣಮಂತ ಅಜೂರ (32), ಶೋಭಾ ಮಲ್ಲಪ್ಪ ಅಜೂರ (36), ಚಾಲಕ ಹಣಮಂತ ಸಿದ್ದಬಾ ಜಾಧವ (42), ಅಂಬಿಕಾ (14) ಎಂದು ಗುರುತಿಸಲಾಗಿದೆ. ಕಸ್ತೂರಿ, ಮೇಘಾ, ಶಿವಾನಂದ, ಬಸಪ್ಪ, ಮಲ್ಲಪ್ಪ ಅಕ್ಷಿತ, ಉದಯ, ಸುನಂದಾ, ಮಹೇಶ, ಸಾಕ್ಷಿ ಮತ್ತು ಬಸವರಾಜ ಸೇರಿ ಒಟ್ಟು 11 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ವಾಹನದಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಪೊಲೀಸರು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಗಾಯಾಳುಗಳ ಪೈಕಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ತಿರುಪತಿಯ ರೂವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share This Article