ಕೇರಳ ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಫೋಟ; ೧ ಸಾವು, ೪೦ ಜನರಿಗೆ ಗಾಯ

khushihost
ಕೇರಳ ಪ್ರಾರ್ಥನಾ ಮಂದಿರದಲ್ಲಿ ಸರಣಿ ಸ್ಫೋಟ; ೧ ಸಾವು, ೪೦ ಜನರಿಗೆ ಗಾಯ

ಕೊಚ್ಚಿ(ಕೇರಳ), ೨೯: ಕೊಚ್ಚಿ ನಗರದಿಂದ 10 ಕಿ. ಮೀ. ದೂರದಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಕ್ರೈಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಆರಂಭಿಕ ಮಾಹಿತಿ ಪ್ರಕಾರ ಕನಿಷ್ಟ ಪಕ್ಷ ಓರ್ವ ಮೃತಪಟ್ಟು ೪೦ ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಪ್ರಾರ್ಥನಾ ಮಂದಿರಕ್ಕೆ ರವಿವಾರದ ಪ್ರಾರ್ಥನೆಗಾಗಿ ಸುಮಾರು 2 ಸಾವಿರ ಮಂದಿ ಸೇರಿದ್ದರು ಎಂಬ ಮಾಹಿತಿ ಇದೆ. ಘಟನಾ ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ ಹಾಗೂ ಎನ್‌ಐಎ ತಂಡಗಳು ರವಾನೆಯಾಗಿವೆ.

ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಸ್ಫೋಟದ ಸದ್ದು ಕೇಳಿದ್ದಾಗಿ ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೇರಳ ರಾಜ್ಯದ ಕೊಚ್ಚಿಯಿಂದ 10 ಕಿ. ಮೀ. ದೂರದಲ್ಲಿ ಇರುವ ಕಲಮಸ್ಸೆರಿ ಎಂಬಲ್ಲಿ ಇರುವ ಜೆಹೋವಾಸ್ ವಿಟ್ನೆಸ್ ಕನ್ವೆನ್ಶನ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಇದು ಕ್ರೈಸ್ತರ ಒಂದು ಪಂಗಡದ ಪ್ರಾರ್ಥನಾ ಮಂದಿರವಾಗಿದೆ. ಇಲ್ಲಿ ರವಿವಾರದ ಪ್ರಾರ್ಥನೆ ನಡೆಯುತ್ತಿತ್ತು. ಪ್ರಾರ್ಥನೆಯ ಮಧ್ಯದಲ್ಲೇ ಸ್ಫೋಟ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ಫೋಟ ಸಂಭವಿಸಿದ ಕೂಡಲೇ ಪ್ರಾರ್ಥನೆ ನಡೆಸುತ್ತಿದ್ದವರು ಪ್ರಾರ್ಥನಾ ಮಂದಿರದಿಂದ ಹೊರಗೆ ಓಡಿ ಬಂದರು. ಪ್ರಾರ್ಥನಾ ಮಂದಿರದ ಒಳಗೆ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಸ್ಫೋಟ ಸಂಭವಿಸಿದ ವೇಳೆ ಓರ್ವ ಗಾಯಗೊಂಡು 23 ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದೆ.

ಒಟ್ಟು ಮೂರು ಬಾರಿ ಸ್ಫೋಟಗಳು ಸಂಭವಿಸಿದವು ಎಂದು ಪ್ರಾರ್ಥನಾ ಮಂದಿರದಲ್ಲಿ ಇದ್ದವರು ಹಾಗೂ ಈ ಪ್ರಾರ್ಥನಾ ಮಂದಿರದ ಅಕ್ಕಪಕ್ಕದ ಮನೆಗಳ ನಿವಾಸಿಗಳು ತಿಳಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ಸ್ಫೋಟ ಘಟನೆಯನ್ನು ದುರಾದೃಷ್ಟಕರ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ರೀತಿಯಲ್ಲಿ ನಿಭಾಯಿಸಲಿದೆ ಎಂದು ತಿಳಿಸಿದ್ದಾರೆ. ಕೇರಳ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳೂ ಘಟನಾ ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ.

ಅವರು ಸರ್ಕಾರಿ ಆಸ್ಪತ್ರೆಗಳ ಎಲ್ಲಾ ಸಿಬ್ಬಂದಿಗೆ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಭಾನುವಾರವಾದ್ದರಿಂದ ಬಹುತೇಕರು ರಜೆಯಲ್ಲಿದ್ದರು. ಆದರೆ ಸ್ಫೋಟದಂಥಾ ಗಂಭೀರ ಸನ್ನಿವೇಶ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ವೈದ್ಯರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿದೆ.

ಸ್ಫೋಟ ಸಂಭವಿಸಿದ ಪ್ರಾರ್ಥನಾ ಮಂದಿರದ ಸುತ್ತಲೂ ಖಾಕಿ ಸರ್ಪಗಾವಲು ಹಾಕಲಾಗಿದೆ. ಹತ್ತಾರು ಆಂಬುಲೆನ್ಸ್‌ಗಳು, ನೂರಾರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರಾರ್ಥನಾ ಮಂದಿರದ ಬಳಿ ಗುಂಪು ಸೇರಿದ್ದ ಜನರನ್ನು ಚೆದುರಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಭರದಿಂದ ಸಾಗಿದೆ. ಗಾಯಾಳುಗಳ, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳದಲ್ಲಿ ಇದ್ದ ಮಹಿಳೆಯರು ಹಾಗೂ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಪ್ರಾರ್ಥನಾ ಮಂದಿರದಲ್ಲಿ ಬೆಂಕಿ ಹೊತ್ತಿಕೊಂಡಿದ್ದ ವೇಳೆ ಬೆಂಕಿ ನಂದಿಸಲು ಹಲವರು ಪ್ರಯತ್ನ ನಡೆಸಿದ್ದರು. ಪ್ರಾರ್ಥನಾ ಮಂದಿರದ ಒಳಗಿದ್ದ ಚೇರುಗಳು, ಪೀಠೋಪಕರಣಗಳು ಧ್ವಂಸವಾಗಿವೆ ಎಂದು ತಿಳಿದು ಬಂದಿದೆ.

Share This Article