ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ; ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ

khushihost
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ; ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ

ಅಯೋಧ್ಯೆ,22: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ಇಂದು ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು. ಇದರೊಂದಿಗೆ ದಶಕಗಳ ಹೋರಾಟದ ನಂತರ ರಾಮಮಂದಿರ ಉದ್ಘಾಟನೆಯಾದಂತಾಗಿದೆ.

ವಿಶೇಷ ಹೆಲಿಕಾಪ್ಟರ‌ನಲ್ಲಿ ರಾಮಮಂದಿರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳ್ಳಿಯ ಛತ್ರಿವನ್ನು ಹಿಡಿದುಕೊಂಡು ರಾಮಮಂದಿರ ಪ್ರವೇಶಿಸಿದರು. ನಂತರ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡ ಅವರು, ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕೈಂಕರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ,  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹಾಗೂ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್‌ ಅವರು ಅವರು ಇದ್ದರು.

ಈ ಹಿಂದೆ ಪೂಜಿಸಲ್ಪಡುತ್ತಿದ್ದ ರಾಮನ ವಿಗ್ರಹವನ್ನೂ ಗರ್ಭಗುಡಿಯಲ್ಲಿ ರಾಮ ಲಲ್ಲಾನ ಹೊಸ ಮೂರ್ತಿಯ ಎದುರು ಇರಿಸಲಾಗಿದ್ದು ಪ್ರಾಣ ಪ್ರತಿಷ್ಠೆ ಸಂಬಂಧಿತ ಧಾರ್ಮಿಕ ಪ್ರಕ್ರಿಯೆಗಳು ನಡೆದವು. ಇದರೊಂದಿಗೆ 2019ರಲ್ಲಿ ಸುಪ್ರೀಮ ಕೋರ್ಟ ನೀಡಿದ ಐತಿಹಾಸಿಕ ತೀರ್ಪಿನಂತೆ ರಾಮಮಂದಿರವನ್ನು ನಿರ್ಮಿಸಿ, ಲೋಕಾರ್ಪಣೆ ಮಾಡಿದಂತಾಗಿದ್ದು ರಾಮಮಂದಿರದ ಕನಸು ಸಾಕಾರಗೊಂಡಿದೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಖ್ಯಾತ ಹಿಂದಿ ನಟ ಅಮಿತಾಬ ಬಚ್ಚನ್‌, ರಣಬೀರ ಕಪೂರ್‌, ಆಲಿಯಾ ಭಟ್‌, ಆಯುಷ್ಮಾನ ಖುರಾನಾ, ಕನ್ನಡ ನಟ ರಿಷಭ ಶೆಟ್ಟಿ, ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ, ಮುಕೇಶ ಅಂಬಾನಿ ಕುಟುಂಬಸ್ಥರು, ಗಾಯಕ ಸೋನು ನಿಗಮ್‌, ತೆಲುಗು ನಟ ಚಿರಂಜೀವಿ, ಅವರ ಪುತ್ರ ರಾಮ ಚರಣ ತೇಜ್ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.

ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ನೆರವೇರುತ್ತಿದ್ದಂತೆ ಎಲ್ಲೆಡೆ ರಾಮನಾಮ ಮುಗಿಲುಮುಟ್ಟಿತ್ತು ಹಾಗೂ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ರಾಮ ಮಂದಿರದ ಮೇಲೆ ಪುಷ್ಪವೃಷ್ಟಿಗರೆದವು.

Share This Article