ಪರೀಕ್ಷೆ ಮುಗಿಸಿ ಜಲಪಾತಕ್ಕಿಳಿದಿದ್ದ ಸ್ನೇಹಿತರು; ಓರ್ವ ಜಲಸಮಾಧಿ

khushihost
ಪರೀಕ್ಷೆ ಮುಗಿಸಿ ಜಲಪಾತಕ್ಕಿಳಿದಿದ್ದ ಸ್ನೇಹಿತರು; ಓರ್ವ ಜಲಸಮಾಧಿ

ಬೆಳಗಾವಿ, 14:  ಹತ್ತನೇ ತರಗತಿ ಅಂತಿಮ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಸ್ನೇಹಿತರೊಂದಿಗೆ ಮಹಾರಾಷ್ಟ್ರದ ಚಂದಗಡ ತಾಲೂಕಿನ ಕಿತವಾಡ ಫಾಲ್ಸನಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿದ್ದ ಅಜಮ ನಗರದ ಉಜೈಸ ಮುಜಾವರ ಮೃತ ದೇಹ ಗುರುವಾರ ಮುಂಜಾನೆ ಸಿಕ್ಕಿದೆ.

ಇಲ್ಲಿನ ಲವ್ ಡೇಲ್ ಸೆಂಟ್ರಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಜೈಸ ಮತ್ತು ಶಾಲೆಯ 13 ಸ್ನೇಹಿತರು ಬುಧವಾರ ಕೊನೆಯ ಪರೀಕ್ಷೆ ಬರೆದು ಬೈಕ್ ನಲ್ಲಿ ಕಿತವಾಡ ಫಾಲ್ಸಗೆ ಮಧ್ಯಾಹ್ನ ತೆರಳಿದ್ದರು. ಮಧ್ಯಾಹ್ನ ಊಟದ ನಂತರ ಸ್ನೇಹಿತರೆಲ್ಲ ನೀರಿಗಿಳಿದಿದ್ದರು. ಸ್ನೇಹಿತರನ್ನು ತಮಾಷೆಯಿಂದ ಹೆದರಿಸಲು ಉಜೈಸ ನೀರಿನಲ್ಲಿ ಎರಡು ಬಾರಿ ಮುಳುಗಿ ಪುನಃ ಮುಖ ಮೇಲೆ ತಂದಿದ್ದಾನೆ. ಆದರೆ ಮೂರನೇ ಸಲವೂ ಹಾಗೇ ಮಾಡಲು ಹೋಗಿ ಆತ ನೀರಲ್ಲಿ ಮುಳುಗಿದ್ದಾನೆ.

ಆತಂಕಗೊಂಡ ಸ್ನೇಹಿತರು ಕೂಗಾಡಿದ್ದಾರೆ. ನಂತರ ನೆರೆದ ಜನ ಪೊಲೀಸರಿಗೆ ಮಾಹಿತಿ ನೀಡಿ ಉಜೈಸಗಾಗಿ ನೀರಿಗಿಳಿದು ಹುಡುಕಿದ್ದಾರೆ. ಅವನ ಪಾಲಕರಿಗೂ ಮಾಹಿತಿ ನೀಡಿದ್ದರಿಂದ ಅವರೂ ಧಾವಿಸಿ ಬಂದಿದ್ದರು. ಆದರೆ ಆತ ನಿನ್ನೆ ಸಿಕ್ಕಿರಲಿಲ್ಲ. ರಾತ್ರಿಯಾದ್ದರಿಂದ ಹುಡುಕುವ ಕಾರ್ಯಾಚರಣೆಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಗುರುವಾರ ಮುಂಜಾನೆ ಪುನಃ ಹುಡುಕಿದಾಗ ಉಜೈಸ ನೀರಲ್ಲಿ ತೇಲುತ್ತಿದ್ದದ್ದು ಕಂಡು ಬಂದಿದೆ.

ಚಂದಗಡ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ  ನಡೆಸಿದ ನಂತರ ಮೃತ ದೇಹವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.

Share This Article