ಸಂತೋಷ ಪದ್ಮಣ್ಣವರ ಕೊಲೆ: ನಡೆದಿದ್ದೇನು?

khushihost
ಸಂತೋಷ ಪದ್ಮಣ್ಣವರ ಕೊಲೆ: ನಡೆದಿದ್ದೇನು?

ಬೆಳಗಾವಿಅಕ್ಟೋಬರ 9ರಂದು ಸಾವಿಗೀಡಾದ ಬಡ್ಡಿ ವ್ಯವಹಾರ ಮಾಡುತ್ತಿದ್ದ ಮತ್ತು ರಿಯಲ್ ಎಸ್ಟೇಟ್ ಉದ್ದಿಮೆದಾರ ಆಂಜನೇಯ ನಗರದ ಸಂತೋಷಪದ್ಮಣ್ಣವರ ಸಾವು ಮಹತ್ವದ ತಿರುವು ಪಡೆದಿದೆ. ಸಂತೋಷ ಪತ್ನಿ ಹಾಗೂ ಇತರ ನಾಲ್ವರ ವಿರುದ್ಧ ಅವರ ಪುತ್ರಿ ಸಂಜನಾ ದೂರು ದಾಖಲಿಸಿದ್ದು ಬುಧವಾರ ಶವ ಹೊರ ತೆಗೆದು ತನಿಖೆ ಆರಂಭಿಸಲಾಗಿದೆ. ಸಂತೋಷ ಅವರ ಪತ್ನಿ ಉಮಾನೇ ತನ್ನಿಬ್ಬರು ಪರಿಚಯಸ್ಥ ನೆರವಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೋಲೀಸರ ಪ್ರಾಥಮಿಕತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ತಾಯಿ ಉಮಾ (41 ವರ್ಷ), ಇವರ ಫೇಸಬುಕ್ಸ್ನೇಹಿತ, ಮಂಗಳೂರಿನ ಶೋಬಿತ ಗೌಡ (30 ವರ್ಷ), ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಹಾಗೂ ಇನ್ನೊಬ್ಬ ಅಪರಿಚಿತ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಪುತ್ರಿಯಿಂದ ಎಫ್ಐಆರ್ದಾಖಲಾಗಿದೆ.

ಕೋಟ್ಯಾಧಿಪತಿ ಸಂತೋಷ ಹತ್ಯೆಗೆ ನಿಖರ ಕಾರಣ ಇನ್ನೂ ಗೊತ್ತಾಗಿರದಿದ್ದರೂ ಪತಿಪತ್ನಿ ನಡುವೆ ಸಂಬಂಧ ಸರಿಯಿರಲಿಲ್ಲ, 46 ವರುಷದ ಸಂತೋಷ ಅವರು ಉಮಾ ಅಲ್ಲದೇ ಇನ್ನೊಬ್ಬ ಮಹಿಳೆಯ ಜೊತೆ ಮದುವೆಯಾಗಿದ್ದರು. ಹಾಗೆಯೇ ಉಮಾ ಕೂಡ ಫೇಸಬುಕ್ ಗೆಳೆಯನ ಜೊತೆ ನಿಕಟವಾಗಿದ್ದರು. ವಿಷಯದ ಕುರಿತು ಅವರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳು*ಸಮದರ್ಶಿ*ಗೆ ತಿಳಿಸಿವೆ.

ಉಮಾ ತನ್ನ ಪತಿ ಸಂತೋಷ ಕೊಲೆಗೆ ಇಬ್ಬರು ಪುರುಷರನ್ನು ಬಳಸಿಕೊಂಡಿದ್ದಳು. ಅವರ ಕುರಿತು ಆಕೆ ಮಾಹಿತಿ ನೀಡಿದ್ದು ಅವರ ಹಿನ್ನಲೆ ಪರಿಶೀಲಿಸಲಾಗುತ್ತಿದೆ. ಸಂತೋಷ ಹತ್ಯೆಗೆ ಅವರು ಸುಪಾರಿ ತೆಗೆದುಕೊಂಡಿದ್ದಾರೆಯೋ ಅಥವಾ ಹೇಗೆ ಎಂದು ನಾವು ತನಿಖೆ ಮಾಡುತ್ತಿದ್ದೇವೆಎಂದು ಬೆಳಗಾವಿ ಪೊಲೀಸ್ ಆಯುಕ್ತ ಎಡಾ ಮಾರ್ಟೀನ್ ತಮ್ಮನ್ನು ಭೆಟ್ಟಿಯಾದ ಪತ್ರಕರ್ತರಿಗೆ ತಿಳಿಸಿದರು.

ಅಕ್ಟೋಬರ 10 ರಂದು ಹೂಲ್ಪಟ್ಟ ಸಂತೋಷ ಅವರ ಶವವನ್ನು ಬುಧವಾರ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಹೇಗೆ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬರಲಿದೆ.

“ಉಮಾಗೆ ಹತ್ಯೆ ಮಾಡಲು ಸಹಕರಿಸಿದ ಇಬ್ಬರ ಕುರಿತು ಮಾಹಿತಿ ಲಭ್ಯವಾಗಿದೆ. ಪತಿ ಸಂತೋಷ ಹತ್ಯೆಗೆ ಉಮಾ ಇಬ್ಬರನ್ನು ಹಣಕೊಟ್ಟು ಬಳಸಿದ್ದರೆ ಎಂಬ ಕುರಿತು ನಿಜವಾದ ಮಾಹಿತಿ ಇಬ್ಬರ ಬಂಧನದ ನಂತರ ಗೊತ್ತಾಗಲಿದೆಎಂದು ತಿಳಿಸಿದ ಪೊಲೀಸ್ ಆಯುಕ್ತ ಮಾರ್ಟೀನ್ ಅವರು, ಪ್ರಾಥಮಿಕ ವಿಚಾರಣೆಯಿಂದ ಉಮಾ, ತಾನು ಹತ್ಯೆಗೆ ಉಪಯೋಗಿಸಿಕೊಂಡ ಇಬ್ಬರು ಪುರುಷರು ತನಗೆ ಫೇಸಬುಕ್ ಮೂಲಕ ಪರಿಚಯವಾದವರೆಂದು ಹೇಳಿದ್ದಾರೆ. ಆದರೂ ನಿಜವಾದ ವಿಷಯ ಅವರ ಬಂಧನದ ನಂತರ ತಿಳಿಯಲಿದೆ” ಎಂದು ಆಯುಕ್ತ ಮಾರ್ಟೀನ್ ತಿಳಿಸಿದರು.

ಮೃತ ಸಂತೋಷ ಶವದ ಮೇಲೆ ಒಂದು ರಕ್ತದ ಕಲಿಯೂ ಇರಲಿಲ್ಲ. ಬಹುಶ:ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಅವರ ಶವ ಬೆಡ್ ರೂಮ್ ಹಾಸಿಗೆಯ ಮೇಲಿತ್ತು ಎಂದು ಪೊಲೀಸರಿಗೆ ಉಮಾ ತಿಳಿಸಿದ್ದಾಳೆ

ನಡೆದಿದ್ದೇನು ?
———-
—————–
ಸಂತೋಷ ಫೈನಾನ್ಸ ಹೆಸರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ಸಂತೋಷಪದ್ಮಣ್ಣವರ ಹೃದಯಾಘಾತದಿಂದ ಅಕ್ಟೋಬರ್ 9ರಂದು ಮೃತಪಟ್ಟಿರುವುದಾಗಿ ಪತ್ನಿ ಉಮಾ ಹೇಳಿದ ನಂತರ ಕುಟುಂಬದವರು ಲಿಂಗಾಯತ ಸಂಪ್ರದಾಯದಂತೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯಕ್ರಿಯೆ ನೆರವೇರಿದ ಬಳಿಕ ತಮ್ಮ ತಂದೆಯ ಕೊನೆಯ ಕ್ಷಣಗಳನ್ನು ಸಿಸಿಟಿವಿಯಲ್ಲಿ ನೋಡಬೇಕು ಎಂದು ಬಯಸಿದಾಗ ಈ ಕೃತ್ಯ ಬಯಲಾಗಿದೆ. ಇದರಿಂದ ಅನುಮಾನಗೊಂಡ ಮಗಳು ತನ್ನ ತಂದೆಯ ಸಾವಿನ ಶಂಕೆ ವ್ಯಕ್ತಪಡಿಸಿ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಳು.

ದೂರು ಸ್ವೀಕರಿಸಿದ ಮಾಳಮಾರುತಿ ಠಾಣೆ ಪೊಲೀಸರು ಕೂಡಲೇ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ, ಅಲ್ಲದೇ ಸಂತೋಷ ಅವರ ನೆರೆಮನೆಯವರ ಸಿಸಿಟಿವಿ ದೃಶ್ಯಾವಳಿ ಗಮನಿಸಿದಾಗ ಮನೆಗೆ ಯಾರೋ ಇಬ್ಬರು ಅಪರಿಚಿತರು ಬಂದು ಹೋಗಿರುವುದು ಕಂಡು ಬಂದಿದೆ. ಕುರಿತು ಸಂತೋಷ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಪತಿ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಲ್ಲದೇ ನನ್ನ ಮೇಲೆ ಅನುಮಾನ ಪಡುತ್ತಿದ್ದ. ಹಾಗಾಗಿ ತನ್ನ ಫೇಸಬುಕ್ ಗೆಳೆಯನ ಜೊತೆ ಸೇರಿ ಕುಡಿಯುವ ನೀರಿಗೆ ನಿದ್ದೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿದ ಬಳಿಕ ದಿಂಬಿನ ಸಹಾಯದಿಂದ ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ!.

ನಂತರ ತನ್ನ ಪತಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಉಮಾ ಸಂಬಂಧಿಕರಿಗೆಲ್ಲ ಮಾಹಿತಿ ನೀಡಿದ್ದಾರೆ. ಅಗ ಸಂಬಂಧಿಕರು ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಇಂಜಿನೀಯರಿಂಗ ಓದುವ ಸಂತೋಷ ಅವರ ಮಗಳು ಸಂಜನಾಗೆ ಸಾವಿನ ವಿಚಾರ ತಿಳಿಸಲಾಗಿತ್ತು. ಅದರಂತೆ ದಿ. 10 ರಂದು ಸಂಜನಾ ಬಂದ ನಂತರ ಅಂತ್ಯಕ್ರಿಯೆ ಮುಗಿಸಲಾಯಿತು. ಅಂತ್ಯಕ್ರಿಯೆ ನಂತರ ಮನೆಗೆ ಬಂದ ವೇಳೆ ಮಗಳು ಮನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೋಡಬೇಕೆಂದು ಕೇಳಿಕೊಂಡಿದ್ದಾಳೆ. ಇದೆ ವೇಳೆಗೆ ತನ್ನ ಕೃತ್ಯ ಹೊರಬರುತ್ತೆ ಎಂದು ಗಾಬರಿಗೊಂಡ ತಾಯಿ ಮಗಳಿಗೆ ಗದರಿಸಿ ಸ್ನಾನಕ್ಕೆ ಹೋಗುವಂತೆ ಹೇಳಿ ಆಕೆ ಸ್ನಾನಕ್ಕೆ ಹೋದ ವೇಳೆ ಸಿಸಿ ಟಿವಿ ದೃಶ್ಯಾವಳಿಯನ್ನು ಪುತ್ರ ಸುಜಲ್ (೧೩) ಮತ್ತು ಅಕುಲ್ (೮) ಸಹಕಾರದಿಂದ ಡಿಲೀಟ್ಮಾಡಿಸಿದ್ದಾಳೆ.

ಪೊಲೀಸರ ಮಾಹಿತಿ

ಸಂತೋಷ ಪತ್ನಿ ಉಮಾ ತನ್ನ ಫೇಸಬುಕ್ಸ್ನೇಹಿತ ಶೋಬಿತ ಗೌಡ (30 ವರ್ಷ) ಎಂಬವನ ಜತೆ ಸಲುಗೆ ಬೆಳೆಸಿಕೊಂಡಿದ್ದರು. ಸಂದೇಹದಿಂದ ಸಂತೋಷ ಜಗಳ ಶುರುಮಾಡಿದ್ದರು. ಅವರ ಉಪಟಳ ತಾಳದೇ ಉಮಾ ಕೊಲೆ ಸಂಚು ರೂಪಿಸಿದ್ದರು. .9ರಂದು ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರ ಹಾಕಿದ್ದರು. ಸಂತೋಷ ನಿದ್ರೆಗೆ ಜಾರಿದ ಮೇಲೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆಮಾಡಿದ ಅನುಮಾನ ಇದೆಎಂದು ಪೊಲೀಸ್ಮೂಲಗಳು ತಿಳಿಸಿವೆ.

ಮೂರು ಅಂತಸ್ತಿನ ಸಂತೋಷ ಮನೆಯಲ್ಲಿ ಬೆಡ್ ರೂಮ್ ಸೇರಿ 16 ಸಿಸಿಟಿವಿ ಕ್ಯಾಮೆರಾಗಳನ್ನು ಅವರು ಅಳವಡಿಸಿದ್ದರು. ಆದರೆ, ಸಾವಿನ ದಿನದ ಬಹುತೇಕ ಫುಟೇಜ್ಗಳನ್ನು ಡಿಲಿಟ್ಮಾಡಿದ್ದು ಅನುಮಾನ ಹುಟ್ಟಿಸಿದೆ. ಎದುರು ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ, ಇಬ್ಬರು ಗಂಡಸರು ತಡರಾತ್ರಿ ಮನೆಯಿಂದ ಹೊರ ಹೋಗಿದ್ದು ಕಂಡುಬಂದಿದೆ. ತನಿಖೆ ನಂತರ ಇದೆಲ್ಲ ಬಯಲಿಗೆ ಬಂತು ಎಂದೂ ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಸದಾಶಿವನಗರದಲ್ಲಿ ಹೂತಿದ್ದ ಸಂತೋಷ ಅವರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮತ್ತೆ ಹೂಳಲಾಯಿತು. ಎಸಿ ಶ್ರವಣಕುಮಾರ ಸಮ್ಮುಖದಲ್ಲಿ ಬಿಮ್ಸ ವೈದ್ಯರು, ಎಫ್ಎಸ್ಎಲ್, ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ, ಪಾಲಿಕೆ ಸಿಬ್ಬಂದಿ, ಕಂದಾಯ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಪ್ರಾಥಮಿಕ ತನಿಖೆ ವೇಳೆ ಸಂತೋಷ ಸಾವು ಸಹಜವಲ್ಲ, ಕೊಲೆ ಎಂಬುದು ದೃಢಪಟ್ಟಿದ್ದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ಹೊರಬರಲಿದೆ.

Share This Article