ಕಾಂತಾರ- ಅಧ್ಯಾಯ 1: ಚಿತ್ರದ ಟ್ರೇಲ‌ರ್ ಬಿಡುಗಡೆಗೆ ಮುಹೂರ್ತ

khushihost
ಕಾಂತಾರ- ಅಧ್ಯಾಯ 1: ಚಿತ್ರದ ಟ್ರೇಲ‌ರ್ ಬಿಡುಗಡೆಗೆ ಮುಹೂರ್ತ

ಬೆಂಗಳೂರು: ಬಹು ನಿರೀಕ್ಷಿತ ‘ಕಾಂತಾರ- ಅಧ್ಯಾಯ 1’ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ ಪ್ರಕಟಿಸಿದೆ.

ಹೊಂಬಾಳೆ ಫಿಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಕಾಂತಾರ ಅಧ್ಯಾಯ 1’ ದರ್ಶನಕ್ಕೆ ಕ್ಷಣಗಣನೆ. ಸೆ. 22ರಂದು ಮಧ್ಯಾಹ್ನ 12:45ಕ್ಕೆ ಚಿತ್ರದ ಟ್ರೈಲ‌ರ್ ಬಿಡುಗಡೆ ಆಗಲಿದೆ ಎಂದು ಪೋಸ್ಟ್‌ನಲ್ಲಿ ಹೇಳಿದೆ.

ರಿಷಬ್‌ ಶೆಟ್ಟಿ ನಿರ್ದೇಶನದ, ಹೊಂಬಾಳೆ ಫಿಲ್ಡ್ ನಿರ್ಮಾಣದ ಈ ಚಿತ್ರ ಅ.2ರಂದು ತೆರೆ ಕಾಣಲಿದೆ. ಈಗಾಗಲೇ ವಿದೇಶಗಳಲ್ಲಿ ಟಿಕೆಟ್ ಕಾಯ್ದಿರಿಸುವಿಕೆ ಪ್ರಾರಂಭಗೊಂಡಿದ್ದು, ಅಲ್ಲಿನ ಪ್ರೇಕ್ಷಕರಿಗೆ ಕಥೆಯ ತಿರುಳನ್ನು ಚಿತ್ರ ತಂಡ ಬಿಟ್ಟುಕೊಟ್ಟಿದೆ.

ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗುತ್ತದೆ. ನಾಗಾ ಸಾಧುವಾಗಿ, ಯೋಧನಾಗಿ ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ.

ಮೊದಲ ಕಾಂತಾರ ಚಿತ್ರದ ಅಮೋಘ ಯಶಸ್ಸಿನ ಬಳಿಕ ರಿಷಬ್‌ ಶೆಟ್ಟಿ ಅವರು ಕಾಂತಾರ-ಚಾಪ್ಟರ್‌ 1 ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರೀ ಪ್ರಚಾರ ಪಡೆದಿತ್ತು. ಆಗೊಮ್ಮೆ ಈಗೊಮ್ಮೆ ಕೇವಲ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿಕೊಂಡು ಬಂದಿದ್ದ ಚಿತ್ರತಂಡ ಇದೀಗ ರಿಲೀಸ್‌ಗೆ ಸಿದ್ದತೆ ನಡೆಸುತ್ತಿದೆ.

ವಿಜಯ್‌ ಕಿರಗಂದೂರು ಅವರು ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ಕಾಂತಾರ-ಚಾಪ್ಟರ್‌ 1 ಚಿತ್ರ ನಿರ್ಮಾಣ ಮಾಡಿದ್ದಾರೆ. ಮೂಲಗಳ ಪ್ರಕಾರ ಇದು ಹೊಂಬಾಳೆ ನಿರ್ಮಾಣ ಮಾಡಿದ ಅತ್ಯಂತ ದುಬಾರಿ ಸಿನಿಮಾ.

ಕನ್ನಡ, ಇಂಗ್ಲೀಷ್‌ ಸೇರಿದಂತೆ ಏಳು ಭಾಷೆಗಳಲ್ಲಿ ಕಾಂತಾರ-ಚಾಪ್ಟರ್‌ 1 ಚಿತ್ರ ಅ.2ರಂದು ಏಕಕಾಲದಲ್ಲಿ ರಿಲೀಸ್‌ ಆಗಲಿದೆ. ಸ್ಪ್ಯಾನಿಶ್‌ ಭಾಷೆಗೂ ಚಿತ್ರ ಡಬ್‌ ಆಗಲಿದೆ. ಆಸ್ಟ್ರೇಲಿಯಾ, ಯುಕೆ, ಅಮೆರಿಕ ಸೇರಿ ವಿಶ್ವದ 30 ದೇಶಗಳಲ್ಲಿ ಕನ್ನಡದ ಈ ಚಿತ್ರ ತೆರೆಗೆ ಬರಲಿದೆ.

ಕಾಂತಾರ-ಚಾಪ್ಟರ್‌ 1 ಟ್ರೇಲರ್‌ ರಿಲೀಸ್‌ ದಿನಾಂಕದ ಬಗ್ಗೆ ಕಳೆದ ಕೆಲ ವಾರಗಳಿಂದ ಸುದ್ದಿಯಾಗುತ್ತಿತ್ತು. ಸೆ.20ರಂದು ಟ್ರೇಲರ್‌ ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಇದೀಗ ಹೊಂಬಾಳೆ ಫಿಲಂಸ್‌ ಕಾಂತಾರ-ಚಾಪ್ಟರ್‌ 1 ಚಿತ್ರದ ಟ್ರೇಲರ್‌ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ. ಸೆ.22ರಂದು ಮಧ್ಯಾಹ್ನ 12.45ಕ್ಕೆ ಕಾಂತಾರ-ಚಾಪ್ಟರ್‌ 1 ಚಿತ್ರದ ಅಧಿಕೃತ ಟ್ರೇಲರ್‌ ಹೊಂಬಾಳೆ ಫಿಲಂಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

Share This Article