ಕರ್ನಾಟಕ ಪೊಲೀಸರ ಅವಹೇಳನ : ಮರಾಠಿ ಚಿತ್ರದ ನಿರ್ಬಂಧಕ್ಕೆ ಕರವೇ ಒತ್ತಾಯ

khushihost
ಕರ್ನಾಟಕ ಪೊಲೀಸರ ಅವಹೇಳನ : ಮರಾಠಿ ಚಿತ್ರದ ನಿರ್ಬಂಧಕ್ಕೆ  ಕರವೇ ಒತ್ತಾಯ

ಬೆಳಗಾವಿ: ಗಡಿ ವಿಚಾರವಾಗಿ ಒಂದಲ್ಲ ಒಂದು ರೀತಿ ಕಿತಾಪತಿ ಮಾಡುತ್ತಲೇ ಇರುವ ಎಂಇಎಸ್ ಇದೀಗ ಕರ್ನಾಟಕ ಪೊಲೀಸರನ್ನು ಬೈದಾಡುವ ಸಿನಿಮಾವನ್ನು ಮಾಡಿದ್ದು, ಇಂದು ಮರಾಠಿ ಚಿತ್ರ ಬಾಯ್ಸ- 3 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವೆಡೆ ಬಿಡುಗಡೆ ಮಾಡಲು ಎಂಇಎಸ್ ಸಿದ್ಧತೆ ನಡೆಸಿದೆ. ವಿವಾದಾತ್ಮಕ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ಕನ್ನಡಿಗರಿಗೆ ಪ್ರಚೋದಿಸುವಂತೆ ಮಾಡಲು ವಿವಾದಾತ್ಮಕ ಮರಾಠಿ ಚಲನಚಿತ್ರ ಬಾಯ್-3 ಬಿಡುಗಡೆ ಮಾಡಲಾಗುತ್ತಿದ್ದು, ಇದು ಕೇವಲ ಮನೋರಂಜನಾ ಚಿತ್ರವಾಗಿದ್ದಲ್ಲಿ ನಮ್ಮ ವಿರೋಧವಿರಲಿಲ್ಲ. ಆದರೆ ಕರ್ನಾಟಕ-ಮಹಾರಾಷ್ಟ್ರ ಗಡಿ ವಿಷಯವನ್ನಿಟ್ಟು ತಯಾರಾಗಿರುವ ಚಿತ್ರವಾಗಿದೆ. ಚಿತ್ರದ ಒಂದು ದೃಶ್ಯದಲ್ಲಿ ಕರ್ನಾಟಕದ ಪೊಲೀಸ್ ಠಾಣೆಗೆ ಬಂದು, ನಮ್ಮ ಪೊಲೀಸರಿಗೆ ನಿಮಗೆ ಕನ್ನಡ ಭಾಷೆಯ ಮೇಲೆ ಅಭಿಮಾನವಿದ್ದರೆ ನಮಗೂ ನಮ್ಮ ಮರಾಠಿ ಭಾಷೆಯ ಮೇಲೆ ದುಪ್ಪಟ್ಟು ಅಭಿಮಾನವಿದೆ, ಅಷ್ಟಕ್ಕೂ ಮರಾಠಿ ಭಾಷೆಯನ್ನು ಬೆಳಗಾವಿಯಲ್ಲಿ ಮಾತನಾಡದಿದ್ದರೆ ಮತ್ತೆಲ್ಲಿ ಮಾತನಾಡಬೇಕು? ಎಂದು ಪ್ರಶ್ನಿಸುವ ದೃಶ್ಯವಿದೆ.

ಆದ್ದರಿಂದ ಈ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾದರೆ ಕನ್ನಡ, ಮರಾಠಿ ಭಾಷಾ ಬಾಂಧವ್ಯ ಹದಗೆಟ್ಟು ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವವಿದೆ. ಬಾಯ್ಸ-3 ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸುವಂತೆ ಕರವೇ ಕಾರ್ಯಕರ್ತರು ಬೆಳಗಾವಿ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರಿಗೆ ಮನವಿ ಮಾಡಿದ್ದಾರೆ.

Share This Article