ನನ್ನ ವಿರುದ್ಧ ಅಪಪ್ರಚಾರಕ್ಕೆ ಮಾಧ್ಯಮಗಳಿಗೆ ಕೋಟ್ಯಾಂತರ ರೂ. ನೀಡುತ್ತಿರುವ ಬಿಜೆಪಿ -ರಾಹುಲ್

khushihost
ನನ್ನ ವಿರುದ್ಧ ಅಪಪ್ರಚಾರಕ್ಕೆ ಮಾಧ್ಯಮಗಳಿಗೆ ಕೋಟ್ಯಾಂತರ ರೂ. ನೀಡುತ್ತಿರುವ ಬಿಜೆಪಿ -ರಾಹುಲ್

ತುರುವುಕೆರೆ, ೮- ನನ್ನ ವಿರುದ್ಧ ಅಪ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಭಾರತ ಜೋಡೊ ಯಾತ್ರೆಯ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ಸಿದ್ದಾಂತಗಳಿಗೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ ಎಂಬುದು ಅರ್ಥವಾಗಿದೆ. ಹೀಗಾಗಿ ಬಿಜೆಪಿ, ಆರ್ ಎಸ್ ಎಸ್ ಮತ್ತಿತರ ಶಕ್ತಿಗಳು ಗೊಂದಲ ಸೃಷ್ಟಿಸುತ್ತಿವೆ. ತನ್ನ ವಿರುದ್ಧ ಅಪಪ್ರಚಾರಕ್ಕಾಗಿ ಮಾಧ್ಯಮಗಳಿಗಾಗಿ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ ಎಂದರು.

ನನ್ನ ಸತ್ಯ ಭಿನ್ನವಾಗಿದೆ. ನನ್ನ ನಿಲುವು ಏನು ಮತ್ತು ಅದಕ್ಕಾಗಿ ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಜನರು ಎಚ್ಚರಿಕೆಯಿಂದ ನೋಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿವರಿಸಿದರು.

ಸಹಜವಾಗಿ ಈ ಯಾತ್ರೆ ರಾಜಕೀಯ ಉದ್ದೇಶ ಹೊಂದಿದೆ. ರಾಜಕೀಯ ವರ್ಗ ಮತ್ತು ನಮ್ಮ ನಾಗರಿಕರ ನಡುವೆ ಅಂತರವಿದೆ. ರಸ್ತೆಯಲ್ಲಿ ಸಾಗಿ ಜನರನ್ನು ಭೌತಿಕವಾಗಿ ಭೇಟಿ ಮಾಡುವುದು ನನ್ನ ಆಲೋಚನೆ ಆಗಿತ್ತು.  ಇದೀಗ ಕಾರು ಅಥವಾ ವಿಮಾನದಲ್ಲಿ ಹೋಗುವುದಕ್ಕಿಂತ  ಮಾಧ್ಯಮಗಳ ಮೂಲಕ ತಲುಪುವುದು ವಿಭಿನ್ನವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ಬಿಜೆಪಿ ಟೀಕೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ ಎಸ್ ರಾಜಕಾರಣಿ ಮೇಲೆ ದಾಳಿ ಮಾಡಲು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸರ್ಕಾರ ಪತನಗೊಳಿಸಲು, ಒತ್ತಡ ಹೇರಲು ಅವುಗಳನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೆಂದು ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ ಎಂದರು.

ಭಾರತವನ್ನು ಒಗ್ಗೂಡಿಸುವುದು ಭಾರತ್ ಜೋಡೋ ಯಾತ್ರೆ ಉದ್ದೇಶ. 2024 ಚುನಾವಣೆ ದೃಷ್ಟಿಯಿಂದ ಈ ಪರಿಕಲ್ಪನೆ ಬಂದಿಲ್ಲ. ಭಾರತ ವಿಭಜನೆಯಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಮ್ಮ ಸಮಾಜದಲ್ಲಿ ಹಿಂಸೆಯನ್ನು ಹರಡಲಾಗುತ್ತಿದೆ. ಇದು ನಮ್ಮ ಸಮಾಜಕ್ಕೆ ಅಪಾಯಕಾರಿಯಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು

Share This Article