ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ

khushihost
ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ

ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮುಖ್ಯ ಕೇಂದ್ರವಾದ ಆರ್ ಟಿ ಪಿ ಎಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ವಿದ್ಯುತ್ ಉತ್ಪಾದನೆ ವೇಳೆ ಏಕಾಏಕಿ ಕೋಲ್ ಬೆಲ್ಟ್ ಹೊತ್ತಿ ಉರಿಯಿತಾದರೂ ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿತು.

ರಾಯಚೂರಿನ ಶಕ್ತಿನಗರದಲ್ಲಿರುವ ವಿದ್ಯುತ್ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೋಲ್ ಬೆಲ್ಟ ಧಗಧಗಿಸಿ ಉರಿಯಲಾರಂಭಿಸಿದೆ.

ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಶ್ರಮಿಸುವುದರ ಜೊತೆಗೆ ಅಗ್ನಿ ಅನಾಹುತದ ಎಚ್ಚರಿಕೆ ಮೊಳಗಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ತಕ್ಷಣ ಆರಿಸಿತು.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು ಎಂಟು ವಿದ್ಯುತ್ ಉತ್ಪಾದನಾ ಘಟಕಗಳಿವೆ. ಕರ್ನಾಟಕದ ವಿದ್ಯುತ್ ಗೆ ಈ ಘಟಕಗಳ ಕೊಡುಗೆ ದೊಡ್ಡದು. ರಾಯಚೂರು ಘಟಕದ ವಿದ್ಯುತ್ ಉತ್ಪಾದನೆಯಲ್ಲಿ ತುಸು ಏರುಪೇರಾದರೂ ಕರ್ನಾಟಕದಲ್ಲಿ  ತೀವ್ರ ವಿದ್ಯುತ್ ತೊಂದರೆಯಾಗುತ್ತದೆ.

ಅಗ್ನಿ ಅನಾಹುತದಿಂದ ಕಲ್ಲಿದ್ದಲು ಉರಿಸುವ ಒಲೆಗೆ ಉರುವಲು ಸರಬರಾಜು ಮಾಡುವ ಸುಮಾರು 25 ಕನ್​ವೇಯರ್ ಬೆಲ್ಟ್​ಗಳು ಹೊತ್ತಿ ಉರಿದಿವೆ ಎನ್ನಲಾಗಿದ್ದು ದುರ್ಘಟನೆಯಿಂದ 5 ಮತ್ತು 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡು ವಿದ್ಯುತ್ ಉತ್ಪಾದನೆಗೆ ವ್ಯತ್ಯಯ ಉಂಟಾಗಿದೆ. ಅಗ್ನಿ ಅನಾಹುತದಿಂದ ಸುಮಾರು ₹ 70 ಲಕ್ಷ ಮೌಲ್ಯದಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

Share This Article