ಪರೀಕ್ಷೆ ಹಾಲ್ ಟಿಕೆಟ್ ಮೇಲೆ ಸನ್ನಿ ಲಿಯೋನಿ ಫೋಟೋ

khushihost
ಪರೀಕ್ಷೆ ಹಾಲ್ ಟಿಕೆಟ್ ಮೇಲೆ ಸನ್ನಿ ಲಿಯೋನಿ ಫೋಟೋ

ಶಿವಮೊಗ್ಗ : ನವೆಂಬರ್ 6 ರಂದು ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ನಟಿ ಸನ್ನಿ ಲಿಯೋನ್ ಫೋಟೋ ಮುದ್ರಣಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ವಿದ್ಯಾರ್ಥಿನಿ ಶಿವಮೊಗ್ಗದ  ರುದ್ರಪ್ಪ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದರು. ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇರುವ ಬಗ್ಗೆ ವಿದ್ಯಾರ್ಥಿನಿ ಪರೀಕ್ಷೆ ಬರೆಯುವ ಅರ್ಧ ಗಂಟೆ ಮುಂಚೆ ಕಾಲೇಜಿನ ಪ್ರಾಚಾರ್ಯರಿಗೆ ಮಾಹಿತಿ ನೀಡಿದ್ದಾಳೆ.

ಪ್ರಾಚಾರ್ಯರರು ಡಿಡಿಪಿಐಗೆ ವಿಷಯ ತಿಳಿಸಿದ್ದಾರೆ.
ಬಳಿಕ ಡಿಡಿಪಿಐ ಎಲ್ಲವನ್ನೂ ಗುಪ್ತವಾಗಿರಿಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು. ಘಟನೆ ಸಂಬಂಧ ಕಾಲೇಜಿನ ಪ್ರಾಚಾರ್ಯರರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ನಟಿ ಸನ್ನಿ ಲಿಯೋನ್ ಅವರ ಚಿತ್ರ ಪ್ರಕಟ ಎಂಬ ಸುದ್ದಿಯು ಮಾಧ್ಯಮದಲ್ಲಿ ಬಿತ್ತರಗೊಳ್ಳುತ್ತಿದ್ದು ಇದು ಇಲಾಖೆ ಅಥವಾ ಸರ್ಕಾರದಿಂದ ಉಂಟಾಗಿರುವ ಲೋಪವಲ್ಲ ಎಂದು ಶಿಕ್ಷಣ ಇಲಾಖೆ ಸೃಷ್ಟೀಕರಣ ನೀಡಿದೆ.

ಪ್ರತಿ ಅಭ್ಯರ್ಥಿ ಪರೀಕ್ಷೆಗೆ ಆನ್​ಲೈನ್ ಅರ್ಜಿ ಸಲ್ಲಿಸುವ ಮುನ್ನ ತಾನೇ ತನ್ನ ಯೂಸರ್​ ಐಡಿ ಮತ್ತು ಪಾಸ್​ವರ್ಡ್​ ಅನ್ನು ಸೃಷ್ಟಿಸಿಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ.

ಈ ರೀತಿಯಾಗಿ ಸೃಷ್ಟಿಸಿಕೊಂಡ ಯೂಸರ್​ ಐಡಿ ಮತ್ತು ಪಾಸ್​ವರ್ಡ್ ಮಾಹಿತಿಯು ಸಂಪೂರ್ಣ ಗೌಪ್ಯ ಹಾಗೂ ಅಭ್ಯರ್ಥಿಯ ಖಾಸಗಿ ಮಾಹಿತಿಯಾಗಿರುತ್ತದೆ. ಇದನ್ನು ಬಳಸಿಯೇ ಲಾಗಿನ್ ಆಗುವ ಮೂಲಕ ಅಭ್ಯರ್ಥಿ ತನ್ನ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ನಿಗದಿತ ಅಂಕಣದಲ್ಲಿ ಅಪ್‌ಲೋಡ್ ಮಾಡಿದ ನಂತರ, ತಾನು ನೀಡಿರುವ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಅರ್ಜಿ ಸಬ​ಮಿಟ್​ ಮಾಡಿದ ನಂತರವೇ ನಿಗದಿತ ಅರ್ಜಿ ಶುಲ್ಕ ಪಾವತಿಸಿ, ತನ್ನ ಆನ್‌ಲೈನ್ ಅರ್ಜಿಯ ಪ್ರಿಂಟ್ ಅನ್ನು ಪಡೆಯುತ್ತಾರೆ ಎಂದು ತಿಳಿಸಿದೆ.

ನಮ್ಮ ಕಚೇರಿಯ ತಂತ್ರಾಂಶವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಅಭ್ಯರ್ಥಿಯನ್ನು ಹೊರತುಪಡಿಸಿ ಇತರರು ಆನ್​ಲೈನ್ ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ ಎಂದು ಹೇಳಿದೆ.

ಆದ್ದರಿಂದ ಮಾಧ್ಯಮದಲ್ಲಿ ಬಿತ್ತರವಾಗಿರುವ ಸುದ್ದಿಯಲ್ಲಿ ಇಲಾಖೆಯ ಪಾತ್ರವಿಲ್ಲ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮಾಡಿ, ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Share This Article