ಸಂಕಲ್ಪಯಾತ್ರೆ ಚುನಾವಣೆ ನಂತರ ಆಗಲಿದೆ ವಿಜಯಯಾತ್ರೆ -ಬೊಮ್ಮಾಯಿ

khushihost
ಸಂಕಲ್ಪಯಾತ್ರೆ ಚುನಾವಣೆ ನಂತರ ಆಗಲಿದೆ ವಿಜಯಯಾತ್ರೆ -ಬೊಮ್ಮಾಯಿ

ರಾಯಬಾಗ: ಬಿಜೆಪಿ ಜನಸಂಕಲ್ಪ ಯಾತ್ರೆಗಳು ಮುಂದಿನ ಚುನಾವಣೆಯ ಬಳಿಕ ವಿಜಯ ಯಾತ್ರೆಗಳಾಗಿ ನಡೆಯಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ನಗರದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪಯಾತ್ರೆಯಲ್ಲಿ ಅವರು ಮಾತನಾಡಿ, 60 ವರ್ಷ ಕಾಂಗ್ರೆಸ್ ಆಡಳಿತವನ್ನು ಜನ ನೋಡಿದ್ದಾರೆ. ಯಾವ ಭಾಗ್ಯವೂ ಜನರನ್ನು ಮುಟ್ಟಲಿಲ್ಲ. ಕಾಂಗ್ರೆಸ್‍ ದುರಾಡಳಿತ ಮತ್ತು ಅವರ ದೌರ್ಭಾಗ್ಯ ಜನರಿಗೆ ಬೇಡವಾಗಿದೆ’ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನಡುವಿನ ಜಗಳವೇ ಇನ್ನೂ ಮುಗಿದಿಲ್ಲ. ಖರ್ಗೆ ಅವರು ಎಐಸಿಸಿಯ ಮುಳುಗುವ ದೋಣಿಯ ನಾವಿಕರಾಗಿದ್ದಾರೆ. ಅವರು ಅಧ್ಯಕ್ಷರಾದ ತಕ್ಷಣ ಶಾಸಕ ಸತೀಶ ಜಾರಕಿಹೊಳಿ ಹಿಂದೂ ಅಂದರೆ ಹೊಲಸು ಅಂತ ಹೇಳಿಕೆ ನೀಡಿದರು. ಅವರಿಗೆ ಈ ರೀತಿಯ ಮಾತನಾಡಲು ಮನಸ್ಸು ಹೇಗೆ ಬಂತು ತಿಳಿಯುತ್ತಿಲ್ಲ ಎಂದು ಅವರು ಹೇಳಿದರು.

ನಮ್ಮ ಸನಾತನ ಧರ್ಮ ಹುಟ್ಟಿದಾಗ ಜಗತ್ತಿನಲ್ಲಿ ಯಾವುದೇ ಧರ್ಮ ಹುಟ್ಟಿರಲಿಲ್ಲ. ಸಿಂಧೂ ಸಂಸ್ಕೃತಿ ಹಿಂದೂ ಧರ್ಮವಾಗಿ ಬೆಳೆದಿದೆ. ಇಡೀ ಮನುಕುಲವೊಂದೇ ಎಂದು ಸಾರುವ ಹಿಂದೂ ಧರ್ಮದ ಬಗ್ಗೆ ಅವರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ ಎಂದರು.

ರಾಹುಲ್ ಗಾಂಧಿ ಚುನಾವಣೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮದು ಸಮಾಜವನ್ನು ಜೋಡಿಸುವ ಕೆಲಸವಾದರೆ ಕಾಂಗ್ರೆಸ್‍ನವರದು ಒಡೆಯುವ ಕೆಲಸ ಎಂದು ಮುಖ್ಯಮಂತ್ರಿ ಹೇಳಿದರು.

ಶಾಸಕ ಡಿ.ಎಂ. ಐಹೊಳೆ, ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಪಿ.ರಾಜೀವ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ರವಿಕುಮಾರ, ಮಾಜಿ ಸಂಸದ ರಮೇಶ ಕತ್ತಿ, ಡಾ.ಪ್ರಭಾಕರ ಕೋರೆ ಅವರುಗಳು ಮಾತನಾಡಿದರು.

Share This Article