ಕೊಪ್ಪಳ: ಹಿಂದೂ ಪದದ ಬಗ್ಗೆ ಶಾಸಕ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ತಿರುಚಿ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಹೀಗೆ ಮಾಡುವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ ನಡೆಯಿತು.
ಸತೀಶ ಜಾರಕಿಹೊಳಿ ಅವರು ನೀಡಿರುವ ಹೇಳಿಕೆ ಸತ್ಯವಾಗಿದೆ. ಹಿಂದೂ ಪದಕ್ಕೆ ಇರುವ ಅರ್ಥದ ಉಲ್ಲೇಖದ ಪುಸ್ತಕದ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಆದರೆ, ಎಲ್ಲಿಯೂ ಹಿಂದೂ ಧರ್ಮದ ಬಗ್ಗೆ ಮಾತನಾಡಿಲ್ಲ. ಈ ಬಗ್ಗೆ ಚರ್ಚೆ ನಡೆಯಲಿ ಎಂಬ ಸವಾಲನ್ನೂ ಹಾಕಿದ್ದಾರೆ. ಆದರೆ, ಬಿಜೆಪಿಯ ನಾಯಕರು ತಮ್ಮ ಧರ್ಮಕ್ಕೆ ಅವಮಾನವಾಗಿದೆ ಎಂದು ವಾದ ಮಂಡಿಸುತ್ತಿದೆ ಎಂದು ಬಂಧುತ್ವ ವೇದಿಕೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸತೀಶ ಅವರ ಹೇಳಿಕೆಯನ್ನು ಬಿಜೆಪಿ ದೊಡ್ಡದು ಮಾಡುವ ಬದಲು ಒಂದು ವೇದಿಕೆಯ ಮೂಲಕ ಚರ್ಚೆ ಮಾಡಬೇಕಾಗಿತ್ತು. ತಮ್ಮ ಸರ್ಕಾರದ ಜನವಿರೋಧ ಅನ್ಯಾಯಗಳನ್ನು ಮುಚ್ಚಿ ಹಾಕಲು ಬಿಜೆಪಿ ಹುನ್ನಾರ ಮಾಡಿದೆ ಎಂದು ಆರೋಪಿಸಿದರು.


