ಹಿಂದುಳಿದ ವರ್ಗ, ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳ ಸ್ಕಾಲರಶಿಪ್ ರದ್ದು : ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ 

khushihost
ಹಿಂದುಳಿದ ವರ್ಗ, ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳ ಸ್ಕಾಲರಶಿಪ್ ರದ್ದು : ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ 

ಬೆಂಗಳೂರು: ಎಸ್‍ಸಿ/ಎಸ್‍ಟಿ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಮೆಟ್ರಿಕ್‍ಪೂರ್ವ ವಿದ್ಯಾರ್ಥಿಗಳ ಸ್ಕಾಲರ್​ಶಿಪ್​ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮತ್ತು ಅಲ್ಪಸಂಖ್ಯಾತರನ್ನು ತುಳಿದು ಆಳಬೇಕು ಎಂಬ ಬಿಜೆಪಿಯ ಅಜೆಂಡಾ ನಿಧಾನಕ್ಕೆ ಕಾರ್ಯಗತವಾಗುತ್ತಿದೆ. ನಾನು ಕಳೆದ ಕೆಲವು ವರ್ಷಗಳಿಂದ ಗಮನಿಸಿದಂತೆ ಮೋದಿಯವರ ಬಾಯಲ್ಲಿ ಹೇಳಿಸಿದ ಘೋಷಣೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಸತ್ಯ ಹುದುಗಿರುತ್ತದೆ ಎಂದರು.

ಬಿಜೆಪಿಯವರು ಸಬ್ ಕಾ ವಿಕಾಸ ಎಂದರೆ ಅದು ದಲಿತ, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರ ದಮನ ಎಂದು ಅರ್ಥ. ಬಹುಸಂಖ್ಯಾತರ ವಿನಾಶದ ಯೋಜನೆಗಳನ್ನು ರೂಪಿಸುವಾಗ ಎಲ್ಲ ಜನರ ವಿಕಾಸ ಎಂದು ಸುಳ್ಳು ಹೇಳುತ್ತಾರೆ ಎಂದು ಅವರು ಹೇಳಿದ್ದಾರೆ.

ನಮ್ಮ ಸರ್ಕಾರದಲ್ಲಿ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ, ಶೂ, ಕೆನೆ ಭರಿತ ಹಾಲು, ಸೈಕಲ್ ಹೀಗೆ ವಿವಿಧ ಸೌಲಭ್ಯ ನೀಡಿ ಶಾಲೆಗೆ ಕರೆತಂದು ವಿದ್ಯಾಭ್ಯಾಸ ನೀಡಿ ದಮನಿತರ ಮಕ್ಕಳು ಉದ್ಧಾರವಾಗಲಿ ಎಂಬ ಉದ್ದೇಶದಿಂದ ಈ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಜೊತೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನದ ವ್ಯವಸ್ಥೆಯೂ ಇತ್ತು. ಈ ವಿದ್ಯಾರ್ಥಿ ವೇತನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನಕ್ಕೆ ತಗುಲುವ ವೆಚ್ಚವನ್ನು ಶೇ. 75-25 ಪ್ರಮಾಣದಲ್ಲಿ ಹಂಚಿಕೊಳ್ಳುವುದು ಇಲ್ಲಿಯವರೆಗೂ ನಡೆದುಕೊಂಡು ಬಂದಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಈಗ ಏಕಾಏಕಿ ಒಂದರಿಂದ ಎಂಟನೇ ತರಗತಿವರೆಗಿನ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ದಲಿತ- ಆದಿವಾಸಿ- ಹಿಂದುಳಿದ- ಅಲ್ಪಸಂಖ್ಯಾತ ವಿರೋಧಿ ಸಂವಿಧಾನ ದ್ರೋಹಿ ಕೃತ್ಯವಾಗಿದೆ ಎಂದು ಹೇಳಿದ್ದಾರೆ.

Share This Article