ಬೆಳಗಾವಿಯ ಕಾಲೇಜ್ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಿಡಿದು ನೃತ್ಯ ಮಾಡಿದ ಸಹಪಾಠಿಗಳನ್ನು ಥಳಿಸಿದ ವಿದ್ಯಾರ್ಥಿಗಳು

khushihost
ಬೆಳಗಾವಿಯ ಕಾಲೇಜ್ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಿಡಿದು ನೃತ್ಯ ಮಾಡಿದ ಸಹಪಾಠಿಗಳನ್ನು ಥಳಿಸಿದ ವಿದ್ಯಾರ್ಥಿಗಳು

ಬೆಳಗಾವಿ : ಮರಾಠಿಗರ ಕನ್ನಡ ವಿರೋಧಿ ನೀತಿ ಶೈಕ್ಷಣಿಕ ವಲಯಕ್ಕೂ ವ್ಯಾಪಿಸಿದೆ.  ನಗರದ ಟಿಳಕವಾಡಿಯಲ್ಲಿ ಪ್ರತಿಷ್ಠಿತ ವಾಣಿಜ್ಯ ಮಹಾವಿದ್ಯಾಲಯ ಸೇರಿದಂತೆ ವಿಜ್ಞಾನ, ಕಲಾ, ಬಿಸಿನೆಸ್ ಮ್ಯಾನೇಜಮೆಂಟ್ ಕೋರ್ಸ್ ಗಳನ್ನು ಹೊಂದಿರುವ ಕರ್ನಾಟಕ ಲಾ ಸೊಸೈಟಿಯ ವಾಣಿಜ್ಯ ಮಹಾವಿದ್ಯಾಲಯದ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಕನ್ನಡ ಹಾಡಿಗೆ ಕೆಲ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಡಾನ್ಸ್ ಮಾಡಿದ್ದರು. ಇದನ್ನು ಸಹಿಸಿಕೊಳ್ಳದ ಮರಾಠಿ ಭಾಷಿಕರೆಂದು ಹೇಳಲಾದ ಕೆಲ ವಿದ್ಯಾರ್ಥಿಗಳು ಬಾವುಟ ಹಿಡಿದು ಡಾನ್ಸ್ ಮಾಡಿದ ವಿದ್ಯಾರ್ಥಿಯನ್ನು ಥಳಿಸಿದ್ದಾರೆ.

ಆಗ ಕನ್ನಡ ಮತ್ತು ಮರಾಠಿ ಭಾಷಿಕ ವಿದ್ಯಾರ್ಥಿಗಳ ನಡುವೆ ಹೊಡೆದಾಟವೂ ನಡೆದ ವರದಿಯಿದೆ. ನಂತರ ಕಾಲೇಜಿನ ಪ್ರಾಚಾರ್ಯ ಮತ್ತು ಶಿಕ್ಷಕರು ಹೊಡೆದಾಟ ತಡೆದರೆಂದು ಹೇಳಲಾಗಿದೆ.

ಹೊಡೆತಕೊಳ್ಳಗಾದ ವಿದ್ಯಾರ್ಥಿ ಪೊಲೀಸ್ ರಿಗೆ ದೂರು ನೀಡಿಲ್ಲ, ಆದರೆ ಡಿಸಿಪಿ ರವೀಂದ್ರ ಗಡಾದಿ ಘಟನೆಯನ್ನು ದೃಢಿಕರಿಸಿದ್ದು ಕಾಲೇಜ್ ಕ್ಯಾಂಪಸ್ ನಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಹೊಡೆದಾಟದಲ್ಲಿ ಭಾಗಿಯಾಗಿದ್ದ ಎಲ್ಲ ವಿದ್ಯಾರ್ಥಿಗಳ ವಿಚಾರಣೆ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ಭೂಗತರಾಗಿದ್ದು ಅವರ ಹುಡುಕಾಟ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

Share This Article