ತಾಯಿ, ಸಹೋದರಿ ಸೇರಿ ನಾಲ್ವರನ್ನು ಕೊಚ್ಚಿ ಕೊಂದ 15 ವರ್ಷದ ಬಾಲಕ

khushihost
ತಾಯಿ, ಸಹೋದರಿ ಸೇರಿ ನಾಲ್ವರನ್ನು ಕೊಚ್ಚಿ ಕೊಂದ 15 ವರ್ಷದ ಬಾಲಕ

ಅಗರ್ತಲಾ : 15 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ನಾಲ್ವರನ್ನು ಕೊಂದು, ಸೆಪ್ಟಿಕ್ ಟ್ಯಾಂಕನಲ್ಲಿ ಶವಗಳನ್ನು ಹೂತು ಹಾಕಿದ ಆಘಾತಕಾರಿ ಘಟನೆ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಡೆದಿದೆ.

ಧಲೈ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುರೈ ಶಿಬ್ ಬಾರಿ ಎಂಬ ಗ್ರಾಮದಲ್ಲಿ ನೆಲೆಸಿದ್ದ ಅಜ್ಜ ಬಾದಲ್ ದೇಬನಾಥ (70), ತಾಯಿ ಸಮಿತಾ ದೇಬನಾಥ (32), ಚಿಕ್ಕಮ್ಮ ರೇಖಾ ದೇಬ್ (42) ಮತ್ತು 10 ವರ್ಷದ ಬಾಲಕಿ ಕೊಲೆಯಾಗಿದ್ದಾರೆ.  ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ನಾಲ್ವರನ್ನೂ ಕೊಲೆ ಮಾಡಲಾಗಿದೆ. ಶವಗಳು ಮನೆಯ ಹಿಂದೆ ಸೆಪ್ಟಿಕ್ ಟ್ಯಾಂಕನಲ್ಲಿ ದೊರೆತಿವೆ. ಬಸ್ ಕಂಡಕ್ಟರ್ ಆಗಿರುವ ಬಾಲಕನ ತಂದೆ ಹರದನ್ ದೇಬನಾಥ ಮಧ್ಯರಾತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ಆನಲೈನ್​ ಗೇಮ್​​ ವ್ಯಸನಿಯಾಗಿದ್ದ. ಇದಕ್ಕಾಗಿ ಮನೆಯಲ್ಲಿ ಆಗಾಗ್ಗೆ ಹಣ ಕದಿಯುತ್ತಿದ್ದ ಎಂದು ದೇಬನಾಥ ದೂರಿನಲ್ಲಿ ತಿಳಿಸಿದ್ದಾರೆ.

ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಸದ್ಯಕ್ಕೆ ಬಾಲಕನ ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ. ದುಷ್ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article