50 ಸಾವಿರ ವರ್ಷಗಳ ನಂತರ ಇಂದು ರಾತ್ರಿ ಭೂಮಿಯ ಸಮೀಪ ಬರಲಿದೆ ಹಸಿರು ಧೂಮಕೇತು

khushihost
50 ಸಾವಿರ ವರ್ಷಗಳ ನಂತರ ಇಂದು ರಾತ್ರಿ ಭೂಮಿಯ ಸಮೀಪ ಬರಲಿದೆ ಹಸಿರು ಧೂಮಕೇತು

ಹೊಸದಿಲ್ಲಿ: ಸುಮಾರು 50 ಸಾವಿರ ವರ್ಷಗಳ ಹಿಂದೆ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಫೆ.2ರಂದು ಮಧ್ಯರಾತ್ರಿಯ ನಂತರ ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬರಲಿದೆ. ನಿಯಾಂಡರ್ಥಲ್‌ ಮಾನವರು ಭೂಮಿಯಲ್ಲಿ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಈ ಧೂಮಕೇತು ಭೂಮಿಯ ಸಮೀಪ ಬಂದಿತ್ತು.

ಈ ಬಾರಿ ಈ ಧೂಮಕೇತು ಭಾರತದಲ್ಲೂ ಕಾಣಿಸಿಕೊಳ್ಳಲಿದ್ದು, ಬೈನಾಕ್ಯುಲರ್‌ ಸಹಾಯದಿಂದ ಕತ್ತಲೆಯ ವೇಳೆಯಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈಗಾಗಲೇ ಹಲವು ದೂರದರ್ಶಕಗಳ ಮೂಲಕ ಈ ಧೂಮಕೇತುವಿನ ಚಿತ್ರವನ್ನು ಸೆರೆಹಿಡಿದಿದ್ದು, ಹಸಿರು ಬಾಲದೊಂದಿಗೆ ಪ್ರಕಾಶಮಾನವಾಗಿ ಈ ಧೂಮಕೇತು ಚಲಿಸುತ್ತಿರುವುದು ಕಂಡುಬಂದಿದೆ.

ಉತ್ತರಾರ್ಧಗೋಳದಲ್ಲಿ ಈ ಧೂಮಕೇತು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪ್ರಸ್ತುತ ಇದು ಪೋಲ್‌ ಸ್ಟಾರ್‌ (ಪೊಲಾರಿಸ್‌) ಮತ್ತು ದ ಗ್ರೇಟ್‌ ಬೀರ್‌ (ಸಪ್ತರ್ಷಿ ಮಂಡಲ) ತಾರಾಪುಂಜದ ನಡುವೆ ಕಾಣಿಸಿಕೊಂಡಿದೆ. ಚಂದ್ರನ ಬೆಳಕಿನಿಂದ ಇದು ಸರಿಯಾಗಿ ಕಾಣಿಸದೇ ಇರಬಹುದು. ಹಾಗಾಗಿ ಚಂದ್ರಮರೆಯಾದ ಬಳಿಕ ಸೂರ್ಯೋದಯಕ್ಕೂ ಮೊದಲು ನೋಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಈ ಧೂಮಕೇತುವನ್ನು 2022ರ ಮಾ.2ರಂದು ಖಗೋಳ ವಿಜ್ಞಾನಿಗಳಾದ ಬ್ರೈಸ್‌ ಬೋಲಿನ್‌ ಮತ್ತು ಫ್ರಾಂಕ್‌ ಮಾಸ್ಕಿ ಕಂಡುಹಿಡಿದರು.

ಈ ಮಾದರಿಯ ಧೂಮಕೇತುಗಳು ನಮ್ಮ ಸೌರಮಂಡಲದಾಚೆ ಇರುವ ಊರ್ಚ ಕ್ಲೌಡ್‌ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಿ ಅಲ್ಲಿಂದ ಚಲಿಸಲು ಆರಂಭಿಸುತ್ತವೆ. ಇದೊಂದು ಪ್ರಕಾಶಮಾನವಾದ ಬಾಲ ಹೊಂದಿರುವ ಧೂಮಕೇತುವಾಗಿದ್ದು, ಇಂತಹುದನ್ನು ಮತ್ತೆ ಮುಂದಿನ 50 ಸಾವಿರ ವರ್ಷಗಳವರೆಗೆ ನೋಡಲಾಗುವುದಿಲ್ಲ ಎಂದು ಖಗೋಳ ಶಾಸ್ತ್ರಜ್ಞರು ಹೇಳುತ್ತಾರೆ.

Share This Article