ಅರ್ಜಿ ಹಾಕಿದ್ದಕ್ಕೆ ನಟ ರಮೇಶ ಅರವಿಂದಗೆ ಗೌರವ ಡಾಕ್ಟರೇಟ ಕೊಡುತ್ತಿದ್ದೇವೆ; ಆರ್.ಸಿ.ಯು. ಕುಲಪತಿಯಿಂದ ಗೊಂದಲ ಸೃಷ್ಟಿ

khushihost
ಅರ್ಜಿ ಹಾಕಿದ್ದಕ್ಕೆ ನಟ ರಮೇಶ ಅರವಿಂದಗೆ ಗೌರವ ಡಾಕ್ಟರೇಟ ಕೊಡುತ್ತಿದ್ದೇವೆ; ಆರ್.ಸಿ.ಯು. ಕುಲಪತಿಯಿಂದ ಗೊಂದಲ ಸೃಷ್ಟಿ

ಬೆಳಗಾವಿ : ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟಗೆ ಚಿತ್ರನಟ ರಮೇಶ ಅರವಿಂದ ಅರ್ಜಿ ಹಾಕಿದ್ದರು, ಹೀಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು ಹೇಳಿಕೆ ನೀಡಿ, ಗೊಂದಲ ಸೃಷ್ಟಿಸಿದ್ದಾರೆ.

ಆದರೆ ಈ ಹೇಳಿಕೆಯನ್ನು ಅಲ್ಲಗಳೆದಿರುವ ನಟ ರಮೇಶ ಅರವಿಂದ ಅವರು, ನಾನು ಯಾವುದೇ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೆಪ್ಟೆಂಬರ್ 14ರಂದು ನಡೆಯಲಿರುವ ರಾಣಿ ಚನ್ನಮ್ಮಾ ೧೦ ನೇ ಘಟಿಕೋತ್ಸವದ ನಿಮಿತ್ಯ ಪತ್ರಿಕಾಗೋಷ್ಠಿ ನಡೆಸಿದ ಕುಲಪತಿ ಪ್ರೊ. ರಾಮಚಂದ್ರ ಗೌಡ ಅವರು, ಗೌರವ ಡಾಕ್ಟರೇಟಗೆ ಅರ್ಜಿ ಆಹ್ವಾನಿಸಿದ್ದೇವು, ಅದಕ್ಕೆ ೧೫-೧೬ ಅರ್ಜಿಗಳು ಬಂದಿದ್ದವು, ಅದರಲ್ಲಿ ಮೂವರಿಗೆ ಗೌರವ ಡಾಕ್ಟರೇಟ ನೀಡಲು ಸಮಿತಿ ತೀರ್ಮಾನಿಸಿದೆ ಎಂದು ಹೇಳಿ ವಿವಾದ ಹುಟ್ಟುಹಾಕಿದ್ದಾರೆ.

ಕನ್ನಡ ಚಿತ್ರರಂಗದ ನಟ ರಮೇಶ ಅರವಿಂದ ಅವರು ಅನೇಕ ರಾಜ್ಯ ಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂತಹ ಹಿರಿಯ ವ್ಯಕ್ತಿ ಗೌರವ ಡಾಕ್ಟರೇಟ್ ಪದವಿಗೆ ಅರ್ಜಿ ಹಾಕಿದ್ದಾರೆ ಎನ್ನುವ ಹೇಳಿಕೆ ಅವರ ಗೌರವಕ್ಕೆ ಕುಂದು ತರುವಂಥದ್ದು.

ಈ ಕುರಿತು ಸುದ್ದಿಗಾರರು ರಮೇಶ ಅರವಿಂದ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ಅವರು, ನಾನು ಯಾವುದೇ ರೀತಿಯಲ್ಲಿ ಗೌರವ ಡಾಕ್ಟರೇಟಗೆ ಅರ್ಜಿ ಹಾಕಿಲ್ಲ, ಅವರು ಬಂದು ನನಗೆ  ಕಾರ್ಯಕ್ರಮಕ್ಕೆ ಆಹ್ವಾನ ಮಾತ್ರ ನೀಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಈಗ ರಮೇಶ ಅರವಿಂದ ಅವರು ಗೌರವ ಡಾಕ್ಟರೇಟಗೆ ಅರ್ಜಿ ಹಾಕಿಲ್ಲ ಎಂದು ಹೇಳಿದರೆ ಇತ್ತ ಕುಲಪತಿ ಪ್ರೊ. ರಾಮಚಂದ್ರಗೌಡ ಅವರು ಅರ್ಜಿ ಹಾಕಿದ್ದಕ್ಕೆ ಡಾಕ್ಟರೇಟ ನೀಡುತ್ತಿದ್ದೇವೆ ಎಂದು ಗೊಂದಲ ಸೃಷ್ಟಿಸಿದ್ದಾರೆ.

Share This Article