18 ಶಾಸಕರಿಗೆ ಹನಿಟ್ರ್ಯಾಪ್; ಪೊಲೀಸರ ಬಲೆಗೆ ಅರ್ಚನಾ 

khushihost
18 ಶಾಸಕರಿಗೆ ಹನಿಟ್ರ್ಯಾಪ್;  ಪೊಲೀಸರ ಬಲೆಗೆ ಅರ್ಚನಾ 

ಭುವನೇಶ್ವರ​: ಹನಿಟ್ರ್ಯಾಪ್ ಮಾಡಿ ಅನೇಕ ಅತಿರಥ ಮಹಾರಥರ​ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಅರ್ಚನಾ ನಾಗ್​ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಆರೋಪಿ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಗುಟ್ಟಾಗಿ ನಿಭಾಯಿಸಿದ ಬಗ್ಗೆ ಈ ಹಿಂದೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಆದರೆ, ಈ ಪ್ರಕರಣದಲ್ಲಿ ಹೊರಬಂದಿರುವ ಅನೇಕ ಸಂಗತಿಗಳಿಂದಾಗಿ ಕಮಿಷನರೇಟ್ ಪೊಲೀಸರು ತನಿಖೆಯನ್ನು ಮುಂದುವರಿಸಲು ಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ, ಅರ್ಚನಾಳನ್ನು ಬಂಧಿಸಿ ಒಂದು ವಾರ ಕಳೆದರೂ ಆಕೆಯ ವಿಚಾರಣೆಯನ್ನು ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಅರ್ಚನಾ ಮತ್ತು ಆಕೆಯ ಪತಿ ಜಗಬಂಧು ಚಂದ್ ಅವರು ಅನೇಕ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಕೆಲವು ರಾಜಕಾರಣಿಗಳು ಅರ್ಚನಾ ಪರಿಚಯವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಆಕೆಯೊಂದಿಗಿನ ಸಂಬಂಧವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಪೊಲೀಸರು ಸಹ ಎಲ್ಲಾ ಆಯಾಮದಲ್ಲಿ ಸಕ್ರಿಯವಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಂದಹಾಗೆ ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್​ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು.

ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.

ಬಿಜೆಡಿ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಒಡಿಶಾ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಅರ್ಚನಾಳಿಂದ ಹನಿಟ್ರ್ಯಾಪ್ ಆಗಿರುವ ಆರೋಪ ಹೊತ್ತಿರುವ 11 ಶಾಸಕರಲ್ಲಿ ರಾಜ್ಯ ಸರ್ಕಾರದ 3 ಸಚಿವರೂ ಇದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಬಾಬು ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ರಾಜ್ಯ ಸರ್ಕಾರದ ಹಲವು ಶಾಸಕರು ಮತ್ತು ಸಚಿವರು ಭಾಗಿಯಾಗಿರುವ ಬಗ್ಗೆ ಸತ್ಯ ಬಹಿರಂಗವಾದರೆ ಬಿಜೆಡಿ ಸರ್ಕಾರ ಪತನವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಸಲೂಜಾ ಹೇಳಿದ್ದಾರೆ. ಅಲ್ಲದೆ, ಅರ್ಚನಾ ಅವರ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನಲ್ಲಿ ಅವರ ಎಲ್ಲ ವ್ಯವಹಾರಗಳ ವಿವರಗಳಿವೆ ಎಂದು ತಿಳಿಸಿದ್ದಾರೆ.

Share This Article