ತಂಗಿಯನ್ನು ಚುಡಾಯಿಸುತ್ತಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

khushihost
ತಂಗಿಯನ್ನು ಚುಡಾಯಿಸುತ್ತಿದ್ದಕ್ಕೆ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ಬಸ್‌ ನಿಲ್ದಾಣದಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ‌ ಎಂಬಾತನ ಮೇಲೆ ನಡೆದಿದ್ದ ಹಲ್ಲೆಗೆ ಮಹತ್ವದ ತಿರುವು‌ ಸಿಕ್ಕಿದೆ. ನಾಲ್ಕೈದು ತಿಂಗಳಿಂದ ತನ್ನ ತಂಗಿಯನ್ನು ಚುಡಾಯಿಸುತ್ತಿದ್ದ ಸುನೀಲ‌ನನ್ನು ಮಚ್ಚಿನಿಂದ ಸಮೀರ ಎಂಬಾತ ಹೊಡೆದಿದ್ದಾನೆ ಎಂದು ಶಿವಮೊಗ್ಗ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ‌ ಕುಮಾರ‌ ಬಹಿರಂಗಪಡಿಸಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಕಿ ಅವರು ಮಾಹಿತಿ ನೀಡಿದರು. ಕಳೆದ ನಾಲ್ಕೈದು ತಿಂಗಳಿಂದ ಬಜರಂಗ ದಳದ ಕಾರ್ಯಕರ್ತ ಸುನೀಲನು ಸಮೀರ‌ ಸಹೋದರಿಯನ್ನು ಚುಡಾಯಿಸುತ್ತಿದ್ದನು. ಈ ಕುರಿತು ಸುನೀಲ‌ಗೆ ಸಮೀರನು‌ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಸುನೀಲ‌ ಅದನ್ನೇ ಮುಂದುವರಿಸಿದ್ದನು. ಅಲ್ಲದೇ ಸಮೀರ‌ಗೆ ಕರೆ ಮಾಡಿ ಸುನೀಲನು ಅವನ ತಂಗಿಯ ಫೋನ್‌ ನಂಬರ್‌ ಕೂಡ ಕೇಳಿದ್ದನು. ಇದರಿಂದ ಸಮೀರ‌ ಆಕ್ರೋಶಗೊಂಡಿದ್ದ. ಇಷ್ಟಾಗಿಯೂ ನಿನ್ನೆ ಬೈಕ್‌ನಲ್ಲಿ ಬಂದ ಸುನೀಲನು ಸಮೀರ‌ನನ್ನು ಆತನ ತಂಗಿಯ ವಿಷಯವಾಗಿ ಮತ್ತೆ ಕೆಣಕಿದ್ದಾನೆ. ಆಗ ಇಬ್ಬರೂ ಅಲ್ಲೇ ಬೈದಾಡಿಕೊಂಡಿದ್ದಾರೆ ಎಂದು ಮಿಥುನಕುಮಾರ ತಿಳಿಸಿದರು.

ಸಮೀರ‌ ಮೇಕೆಗಳನ್ನು ಮೇಯಿಸುತ್ತಿದ್ದ. ಅವುಗಳಿಗೆ ಸೊಪ್ಪು ಕತ್ತರಿಸಿ ಹಾಕಲು ಸದಾ ಮಚ್ಚು ಇಟ್ಟುಕೊಂಡಿರುತ್ತಿದ್ದ. ನಿನ್ನೆ ಸುನೀಲ‌ ಜತೆ ಜಗಳವಾದಾಗ ಅದೇ ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಜಿಲ್ಲಾ ಪೊಲೀಸ ವರಿಷ್ಠರು ಮಾಹಿತಿ ನೀಡಿದರು.

ರೀತಿಯ ವಿಚಾರಗಳಿದ್ದರೆ ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ಹೇಳಿದರು.
ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ, ಇಮಿಯಾನ್, ಮನ್ಸೂರ ಎಂಬುವವರು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಪ್ರಕರಣದಲ್ಲಿ ಅವರಿಬ್ಬರ ಪಾತ್ರವೇನು ಎಂಬುದರ ಕುರಿತಾಗಿಯೂ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಮಿಥುನ‌ ಕುಮಾರ‌ ನುಡಿದರು.

ಯುವತಿಯೊಬ್ಬಳ ಹಿಂದೆ ಬಿದ್ದು ಕಿರುಕುಳ ನೀಡಿದ ಬಜರಂಗ ದಳದ ಕಾರ್ಯಕರ್ತ ಸುನೀಲನ‌ ಪರವಾಗಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಮಂಗಳವಾರ ಸಾಗರ ಪಟ್ಟಣ ಬಂದ್‌ ಕರೆ ನೀಡಿವೆ. ಇದೀಗ ಪೊಲೀಸ್‌ ತನಿಖೆಯ ಮೂಲಕ ವಾಸ್ತವ ಸಂಗತಿ ಬಯಲಾಗುತ್ತಲೇ ಸಂಘ ಪರಿವಾರದ ಈ ನಡೆ ಸಾರ್ವಜನಿಕರ ತೀವ್ರ ಟೀಕೆಗೆ ಗುರಿಯಾಗಿದೆ.

Share This Article