ಜನರಿಂದ ತಿರಸ್ಕರಿಸಲ್ಪಟ್ಟು ತೀವ್ರ ಹತಾಶೆ ಆಗಿರುವ ಬಿಜೆಪಿ -ಸಿದ್ದರಾಮಯ್ಯ

khushihost
ಜನರಿಂದ ತಿರಸ್ಕರಿಸಲ್ಪಟ್ಟು ತೀವ್ರ ಹತಾಶೆ ಆಗಿರುವ ಬಿಜೆಪಿ -ಸಿದ್ದರಾಮಯ್ಯ

ಬೆಳಗಾವಿ : ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಅವರ 40% ಕಮಿಷನ್ ಬೇಡಿಕೆಯ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿಯ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆದಾರ ಸಂತೋಷ ಪಾಟೀಲ ಕುಟುಂಬಸ್ಥರಿಗೆ ಇನ್ನು ನ್ಯಾಯ ಸಿಕ್ಕಿಲ್ಲ‌. ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಅವರ ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಶುಕ್ರವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿದರು. ಗುತ್ತಿಗೆದಾರ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆಗಿನ ಸಚಿವ ಈಶ್ವರಪ್ಪ ಖುಲಾಸೆಯಾಗಿದ್ದು ಪಾಟೀಲ ಕುಟುಂಬ ಸೇರಿದಂತೆ ನಾಡಿನ ಜನತೆಗೆ ಆಶ್ಚರ್ಯ ಮತ್ತು ಅಘಾತ ಉಂಟು ಮಾಡಿದೆ. ಅವರು ಖುಲಾಸೆಯಾಗುವಲ್ಲಿ ಹಿಂದಿನ ಸರಕಾರದ ಪಾತ್ರವಿರುವ ಸಾಧ್ಯತೆಯಿದೆ ಎಂದರು.

ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಪಾಟೀಲ ಕುಟುಂಬ ತಮಗೆ ನ್ಯಾಯವೊದಗಿಸಲು ಪ್ರಕರಣದ ಮರು ತನಿಖೆಗೆ ಆಗ್ರಹಿಸಿ, ಅದರಲ್ಲೂ ಸಿಆಯ್ ಡಿಯಿಂದ ತನಿಖೆ ಮಾಡಲು ವಿನಂತಿಸಿಕೊಂಡಿದೆ. ಸರಕಾರ ಕಾನೂನು ಇಲಾಖೆಯ ಸಲಹೆ ಪಡೆದು ಸಂತ್ರಸ್ತ ದುಃಖಿತ ಕುಟುಂಬಕ್ಕೆ ನ್ಯಾಯಾವೊದಗಿಸಲಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದರು.

ಅಥಣಿಗೆ ತೆರಳಲು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಸಂತೋಷ ಪಾಟೀಲ್ ಅವರ ತಾಯಿ, ಪತ್ನಿ ಭೆಟ್ಟಿಯಾಗಿ ಈ ಕುರಿತು ವಿನಂತಿಸಿಕೊಂಡರು.

ಬಿಜೆಪಿಯ ಮಾಜಿ ಸಚಿವ ಆರ್ ಅಶೋಕ ಅವರು ತಮ್ಮ ಸರಕಾರವನ್ನು ಬಿನ್ ಲಾಡನ್ ಸರ್ಕಾರಕ್ಕೆ ಹೋಲಿಸಿದ್ದ ಕುರಿತು ಕೇಳಲಾದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿ,  ಬಿಜೆಪಿಯವರು ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟು ತೀವ್ರ ಹತಾಶರಾಗಿದ್ದಾರೆ. ಅದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಇತ್ತೀಚಿಗೆ ಬೆಳಗಾವಿಯ ಉದ್ಯಮಭಾಗ ಪೊಲೀಸರು ಅಂಗವಿಕಲರೊಬ್ಬರನ್ನು ರಸ್ತೆ ಮೇಲೆ ಅಮಾನವೀಯವಾಗಿ ಥಳಿಸಿದ ವಿಚಾರವಾಗಿ ಅವರು ಉತ್ತರಿಸಿ, ತಪ್ಪಿತಸ್ತ ಪೋಲೀಸರ ವಿರುದ್ಧ ಕ್ರಮ ಜರುಗಿಸಲು ಇಲಾಖಾ ತನಿಖೆ ನಡೆಸಲಾಗುವುದು. ಹಲ್ಲೆ ಮಾಡಿರುವುದು ತಪ್ಪು. ತಪ್ಪು ಮಾಡಿದವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿದರು.

ಗುತ್ತಿಗೆದಾರ ಬಾಕಿ ಬಿಲ್ ಪಾವತಿ ವಿಷಯವಾಗಿ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಬೇಡಿಕೆಯ ವಿಚಾರವಾಗಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದವರು
ಗುತ್ತಿಗೆದಾರರಿಗೆ 3 ವರುಷದಿಂದ ಬಿಲ್ ಪಾವತಿ ಮಾಡಿಲ್ಲ. ಕಾಂಗ್ರೆಸ್ ಸರಕಾರ ಬಂದು ಇನ್ನೂ ಮೂರು ತಿಂಗಳು ಆಗಿಲ್ಲ‌. ಬಿಲ್ ಕೊಡಲೇ ಬೇಕು. ಬಿಜೆಪಿ ಸರಕಾರದ 40% ಕಮಿಷನ್ ವ್ಯವಹಾರದ ಕುರಿತು ತನಿಖೆ ಮಾಡಬೇಕಿದೆ. ಕೆಲಸದ ಗುಣಮಟ್ಟದ ಕುರಿತು ತಿಳಿದುಕೊಳ್ಳಬೇಕು. ಉತ್ತಮ ಕೆಲಸ ಮಾಡಿರುವವರಿಗೆ ತೊಂದರೆ ಇಲ್ಲ‌. ಕಳಪೆ ಕಾಮಗಾರಿ ಕೆಲಸ ಮಾಡಿದವರ ವಿರುದ್ಧ ಕ್ರಮ ಕೈಗೊಳುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಬಿಲ್ ಕೊಟ್ಟಿಲ್ಲ. ಅದಕ್ಕೆ ಕಾರಣವೇನು? ಗುತ್ತಿಗೆದಾರರು ಯಾಕೆ ಕೆಲಸ ಪೂರೈಸಲಿಲ್ಲ. ತಮ್ಮ ಕಮಿಷನ್ ಪಡೆಯಲು ಗುತ್ತಿಗೆದಾರರಿಗೆ ತೊಂದರೆ, ಕಿರುಕುಳ ನೀಡಿದ ಬಿಜೆಪಿ ಈಗ ಅವರ ಪರ ಹೋರಾಟ ಮಾಡುತ್ತಿರುವುದು ವಿಪರ್ಯಾಸ. ಬಿಜೆಪಿಯ ನೈತಿಕತೆಗೆ ಇದು ಇನ್ನೊಂದು ಸಾಕ್ಷಿ. ಮಾಡಲು ಬೇರೆ ಕೆಲಸವಿಲ್ಲದೇ ತಾವು ಇನ್ನೂ ಇದ್ದೇವೆ ಎಂದು ತೋರಿಸಿಕೊಡುವುದಕ್ಕೆ ಈಗ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ ಶುರುವಾಗಿದೆ. ಅದಕ್ಕೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಭಾರಿ ಭ್ರಷ್ಟಾಚಾರ ಮತ್ತು ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದು ಬಿಜೆಪಿಯವರಿಗೆ ಭಯ ಆರಂಭ ಆಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಅವರು ಗೆಲ್ಲಲು ಆಗಲಿಲ್ಲ.
ಮುಂದೆ 20 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ, ಗೆದ್ದೇ ಗೆಲ್ತೀವಿ ಎಂದು ತಿಳಿಸಿದರು.

Share This Article