ಬಿಜೆಪಿಯ ಮರಾಠಿ ಸದಸ್ಯರು ಮಹಾಪೌರ, ಉಪಮಹಾಪೌರರಾಗಿ ಅವಿರೋಧ ಆಯ್ಕೆ

khushihost
ಬಿಜೆಪಿಯ ಮರಾಠಿ ಸದಸ್ಯರು ಮಹಾಪೌರ, ಉಪಮಹಾಪೌರರಾಗಿ ಅವಿರೋಧ ಆಯ್ಕೆ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಮರಾಠಿ ಭಾಷಿಕರಾದ ಬಿಜೆಪಿಯ ಶೋಭಾ ಸೋಮನಾಚೆ ಮತ್ತು ಉಪಮಹಾಪೌರರಾಗಿ ರೂಪಾ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸ್ಪಷ್ಟ ಬಹುಮತವಿಲ್ಲದ ಕಾರಣ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸದ್ದರಿಂದ ಬಿಜೆಪಿ ಅವಿರೋಧವಾಗಿ ಆಯ್ಕೆಗೊಂಡಿದೆ. ಮಹಾಪೌರ, ಉಪಮಹಾಪೌರರಾಗಿ ಆಯ್ಕೆಯಾಗಿರುವ ಶೋಭಾ ಮತ್ತು ರೂಪಾ ಪಾಲಿಕೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ. ಇವರು ಬಿಜೆಪಿಯ ಮೊದಲ ಮಹಾಪೌರ ಮತ್ತು ಉಪಮಹಾಪೌರರಾಗಿದ್ದಾರೆ. ಸರಕಾರ ಮಹಾಪೌರ ಹುದ್ದೆಯನ್ನು ಸಾಮಾನ್ಯ ಮಹಿಳಾ ವರ್ಗಕ್ಕೂ ಮತ್ತು ಉಪಮಹಾಪೌರ ಹುದ್ದೆಯನ್ನು ಹಿಂದುಳಿದ ಮಹಿಳಾ ‘ಬಿ’ ವರ್ಗಕ್ಕೂ ಮೀಸಲಿಟ್ಟಿತ್ತು.

ಚುನಾಯಿತರಾದ ನಂತರ ವಾರ್ಡ ನಂಬರ್ 57 ಪ್ರತಿನಿಧಿಸುವ ಮಹಾಪೌರ ಶೋಭಾ ಅವರು ಪತ್ರಕರ್ತರೊಂದಿಗೆ ಮಾತನಾಡಿ, ತಮ್ಮನ್ನು ಬೆಳಗಾವಿಯ ‘ಪ್ರಧಾನ ಸೇವಕಿ’ ಎಂದು ಉಲ್ಲೇಖಸಿಕೊಂಡರು. ಸ್ವಚ್ಛ ಸುಂದರ ಬೆಳಗಾವಿಗೆ ಪ್ರಯತ್ನಿಸುವದಾಗಿ ಅವರು ತಿಳಿಸಿದರು. ಮಹಾಪೌರ ಹುದ್ದೆಗೆ ವಾಣಿ ಜೋಶಿ ಮತ್ತು ಸಾರಿಕಾ ಪಾಟೀಲ ಸಹ ನಾಮಪತ್ರ ಸಲ್ಲಿಸಿದ್ದರು.

58 ಸದಸ್ಯರ ಪಾಲಿಕೆಗೆ ಇದೆ ಮೊದಲ ಭಾರಿ ಪಕ್ಷಾಧಾರಿತ ಚುನಾವಣೆ ಜರುಗಿದ್ದು ಕನ್ನಡಿಗ ಸದಸ್ಯರನ್ನು ಮಾತ್ರ ಮಹಾಪೌರ ಅಥವಾ ಉಪಮಹಾಪೌರ ಹುದ್ದೆಯ ಒಂದರಲ್ಲಿ ಆಯ್ಕೆ ಮಾಡಲು ಬಿಜೆಪಿ ನಾಯಕರು ಪ್ರಯತ್ನಿಸಲಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ.

ಬಿಜೆಪಿ 35, ಕಾಂಗ್ರೆಸ್ 10, ಎಂ ಇ ಎಸ್ 2, ಎಂಐಎಂ 1 ಮತ್ತು 10 ಪಕ್ಷೇತರರು ಆಯ್ಕೆಯಾಗಿದ್ದಾರೆ. ತಮ್ಮ ಸ್ಪರ್ಧೆ ಪ್ರಯೋಜನವಾಗದು ಎಂದು ಕಾಂಗ್ರೆಸ್ ಮತ್ತು ಪಕ್ಷೇತರರು ಚುನಾವಣೆಗೆ ಹಾಜರಾಗಿರಲಿಲ್ಲ.

2021 ರ ಫೆಬ್ರವರಿ 3ರಂದು ಜರುಗಿದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಹಾಪೌರ ಚುನಾವಣೆಗೂ ಮೊದಲು ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಪೊಲೀಸರ ತಡೆ :
ಮೂರು ಗಂಟೆಗೆ ನಿಗದಿಯಾಗಿದ್ದ ಚುನಾವಣೆಗೆ ಕೇವಲ ಮೂರು ನಿಮಿಷ ತಡವಾಗಿ ಬಂದದ್ದಕ್ಕೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡದ ಪೋಲೀಸರ ವಿರುದ್ಧ ವಿರೋಧಿ ಪಕ್ಷದ ಸದಸ್ಯರಾದ ಸೊಹೇಲ್ ಸಂಗೊಳ್ಳಿ, ಖುರ್ಶಿದ ಮುಲ್ಲಾ ಮತ್ತು ಝರೀನಾ ಖಾನ್ ಅವರುಗಳು ಚುನಾವಣೆ ನಡೆಯುತ್ತಿದ್ದ ಕೌನ್ಸಿಲ್ ಸಭಾಂಗಣದ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖುರ್ಶಿದ ಮುಲ್ಲಾ, “ನಾವು ಮೂವರೂ ಸರಿಯಾದ ಸಮಯಕ್ಕೆ ಬಂದಿದ್ದೇವಾದರೂ ಪಾಲಿಕೆಯ ಮುಖ್ಯ ದ್ವಾರದಲ್ಲಿ ತಮ್ಮನ್ನು ಪೊಲೀಸರು ತಡೆದರು.  ಎಷ್ಟೇ ವಿನಂತಿ ಮಾಡಿಕೊಂಡರೂ ಒಳಗೆ ಬಿಡಲಿಲ್ಲ” ಎಂದು ಅವರು ತಿಳಿಸಿದರು.

 

Share This Article