ಸತೀಶ ಜಾರಕಿಹೊಳಿ ಹೇಳಿಕೆ ಬಗ್ಗೆ ಬೊಮ್ಮಾಯಿ ವಾಗ್ದಾಳಿ

khushihost
ಸತೀಶ ಜಾರಕಿಹೊಳಿ ಹೇಳಿಕೆ ಬಗ್ಗೆ ಬೊಮ್ಮಾಯಿ ವಾಗ್ದಾಳಿ

ಶಿರಹಟ್ಟಿ: ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ವಾಗ್ದಾಳಿ ನಡೆಸಿದ  ಬಸವರಾಜ ಬೊಮ್ಮಾಯಿ ಅವರು, ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಗಾಗಿ ಈ ಮಟ್ಟಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಜೋಡೋ ಯಾತ್ರೆ ಮಾಡಿದವರು ಈಗ ತೋಡೋ ಮಾಡುತ್ತಿದ್ದಾರೆ ಎಂದರು.

ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ನ ಶಾಸಕರೊಬ್ಬರು ನಿನ್ನೆ ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ನೀಡಿದ್ದಾರೆ. ಹಿಂದೂ ಪದ ಅಶ್ಲೀಲ ಎಂಬ ಚಿಂತನೆಯೇ ಹೊಲಸು. ಹಾಗೆ ಹೇಳುವವರ ಚಿಂತನೆ, ಯೋಚನೆಯಲ್ಲಿಯೇ ಹೊಲಸಿದೆ. ಎಲ್ಲರ ವಿಶ್ವಾಸದ ಬುನಾದಿಗೆ ಪ್ರಶ್ನಿಸಿದ್ದು ಖಂಡನೀಯ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೌನವಾಗಿರುವುದು ಯಾಕೆ? ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯನವರು ಬಿಜೆಪಿ ಜನಸಂಕಲ್ಪ ಯಾತ್ರೆ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಬಿಜೆಪಿ ಯಾತ್ರೆಗೆ ಜನರೇ ಬರುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನಾಶಿರ್ವಾದ ಯಾತ್ರೆ ಮಾಡಿದ್ದರು. ಆಗ ಅವರಿಗೆ ಜನರು ಬೆಂಬಲ ನೀಡಿಲ್ಲ. ಈ ಬಗ್ಗೆ ಅವರಿಗೆ ನೆನಪಿರಲಿ. ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ ಅವರಿಗೆ ಏನಾಗಿದೆ ಗೊತ್ತಿಲ್ಲ ಎಂದರು.

2018ರ ಚುನಾವಣೆಯಲ್ಲಿ ನಮ್ಮನ್ನು ಆಶಿರ್ವಾದ ಮಾಡಿದ್ದು ಶಿರಹಟ್ಟಿ ಜನರು. ಎಲ್ಲಾ ಬೂತ್ ಗಳಲ್ಲೂ ಲೀಡ್ ಕೊಟ್ಟಿದ್ದು ಶಿರಹಟ್ಟಿ ಕ್ಷೇತ್ರ. ಕಾಂಗ್ರೆಸ್ ಪಕ್ಷ 5 ವರ್ಷ ದುರಾಡಳಿತ ನಡೆಸಿತು. 130 ಸೀಟ್ ಇದ್ದ ಕಾಂಗ್ರೆಸ್ ಇಂದು 70ಕ್ಕೆ ಇಳಿದಿದೆ. ಅಧಿಕಾರದ ಆಸೆಯಿಂದ ಕಾಂಗ್ರೆಸ್ ದುರ್ಬಲವಾಗಿದೆ. ಬಿ ಎಸ್ ವೈ ನೇತೃತ್ವದ ಸರ್ಕಾರ ರಚನೆ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಯಾಗಿದೆ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತಿರುತ್ತದೆ. ಅಧಿಕಾರ ಇಲ್ಲದಾಗ ಕಾಂಗ್ರೆಸ್ ಕಬ್ಬಿನ ಕಡ್ಡಿಯಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article