ಕ್ಯಾಂಟೋನ್ಮೆಂಟ ಸಿಇಓ ಸಾವು ಪ್ರಕರಣ; ಮರಣ ಪತ್ರ ಪತ್ತೆ

khushihost
ಕ್ಯಾಂಟೋನ್ಮೆಂಟ ಸಿಇಓ ಸಾವು ಪ್ರಕರಣ; ಮರಣ ಪತ್ರ ಪತ್ತೆ

​ಬೆಳಗಾವಿ, ೨೫:  ಬೆಳಗಾವಿ ಕ್ಯಾಂಟೋನ್ಮೆಂಟ ಬೋರ್ಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆನಂದ (40) ಅವರು ತಮ್ಮ ಸರ್ಕಾರಿ‌ ನಿವಾಸದಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದು, ಶವದ ಬಳಿ ವಿಷದ ಬಾಟಲಿ ಹಾಗೂ ಮರಣ ಪತ್ರವೊಂದು ಸಿಕ್ಕಿದೆ.

2015ರ ಬ್ಯಾಚ್‌ನ ಇಂಡಿಯನ್ ಡಿಫೆನ್ಸ ಎಸ್ಟೇಟ್ ಸರ್ವಿಸ್‌ (ಐಡಿಇಎಸ್‌) ಅಧಿಕಾರಿಯಾಗಿದ್ದ ಆನಂದ ಅವರು, ಒಂದೂವರೆ ವರ್ಷದಿಂದ ಬೆಳಗಾವಿ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದರು. ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಯಲ್ಲಿದ್ದರು. ತಮಿಳುನಾಡಿನ ಚೆನ್ನೈ ನಗರದ ಮೂಲದವರಾದ ಅವರು ಅವಿವಾಹಿತ ಆಗಿದ್ದ ಕಾರಣ  ಒಂಟಿಯಾಗಿ ವಾಸವಾಗಿದ್ದರು.

ಗುರುವಾರ ಸಂಜೆ ತಮ್ಮ ಮಲಗುವ ಕೋಣೆಗೆ ಹೋದವರು ಮತ್ತೆ ಹೊರಬಂದಿರಲಿಲ್ಲ. ಮನೆ ಕೆಲಸದವರಿಗೂ ಯಾವುದೇ ಸೂಚನೆ ನೀಡಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಶನಿವಾರ ಬೆಳಿಗ್ಗೆ ಕೆಲಸದವರು ಕ್ಯಾಂಟೋನ್ಮೆಂಟ ಬೋರ್ಡ (ದಂಡು ಮಂಡಳಿ) ಮಾಜಿ ಉಪಾಧ್ಯಕ್ಷ ಸಾಜಿದ ಶೇಖ ಅವರಿಗೆ ಮಾಹಿತಿ ನೀಡಿದರು. ಸಾಜಿದ ಅವರು ಕ್ಯಾಂಪ್‌ ಠಾಣೆ ಪೊಲೀಸರನ್ನು ಕರೆಸಿ, ಬಾಗಿಲು ಮುರಿದು ಒಳಹೋದಾಗ ಆನಂದ ಶವ ಮಂಚದ ಕೆಳಗೆ ಬಿದ್ದಿದ್ದು ಪತ್ತೆಯಾಯಿತು.

ಚೆನ್ನೈನಲ್ಲಿ ವಾಸವಾಗಿರುವ ಆನಂದ ಅವರ ತಂದೆ ಕೆ.ಕಾಂಗರಾಜ ಅವರಿಗೆ ವಿಷಯ ತಿಳಿಸಲಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಚೆನ್ನೈಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆನಂದ ಅವರ ಮಂಚದ ಮೇಲೆ ವಿಷದ ಬಾಟಲಿ ಹಾಗೂ ಡೆತ್‌ನೋಟ್ ಪತ್ತೆಯಾಗಿದೆ. ಅವುಗಳೂ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಡೆತ್‌ನೋಟ್‌ನಲ್ಲಿ ಇರುವ ವಿಷಯ ಏನೆಂದು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ತಿಳಿಸಿದ್ದಾರೆ.

ದಂಡು ಮಂಡಳಿಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ನ.18ರಂದು ಸಿಬಿಐ ಅಧಿಕಾರಿಗಳ ತಂಡ ದಾಳಿ ಮಾಡಿ, ಪರಿಶೀಲನೆ ಕೂಡ ನಡೆಸಿತ್ತು. ಆದರೆ ‘ಡೆತ್‌ನೋಟ್‌’ನಲ್ಲಿ ಸಿಬಿಐ ದಾಳಿ ಕುರಿತಾದ ಯಾವುದೇ ವಿಷಯ ಪ್ರಸ್ತಾಪ ಇಲ್ಲ ಎಂದು ಎಸ್‌.ಎನ್‌.ಸಿದ್ರಾಮಪ್ಪ ಹೇಳಿದ್ದಾರೆ.

ಡಿಸಿಪಿ ರೋಹನ್ ಜಗದೀಶ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆನಂದ ಅವರ ಮುಖದ ಮೇಲೆ ಅಲ್ಪಪ್ರಮಾಣದ ರಕ್ತಸ್ರಾವ ಕಂಡು ಬಂದಿದೆ. ಬೆಡ್‌ ಮೇಲಿಂದ ಅವರು ಕೆಳಗೆ ಬಿದ್ದಿರಬಹುದು. ರೂಮಿನ ಒಳಗೆ ಬೇರೆ ಯಾರೂ ಒತ್ತಾಯದಿಂದ ಪ್ರವೇಶ ಮಾಡಿದ್ದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.

Share This Article