ರಮೇಶ ಜಾರಕಿಹೊಳಿ ಬಗ್ಗೆ ವೈಯಕ್ತಿಕ ಪ್ರೀತಿ ಇದೆ : ಸಿಎಂ ಇಬ್ರಾಹಿಂ 

khushihost
ರಮೇಶ ಜಾರಕಿಹೊಳಿ ಬಗ್ಗೆ ವೈಯಕ್ತಿಕ ಪ್ರೀತಿ ಇದೆ : ಸಿಎಂ ಇಬ್ರಾಹಿಂ 

ಬೆಳಗಾವಿ: ರಮೇಶ ಜಾರಕಿಹೊಳಿ ಬಗ್ಗೆ ವೈಯಕ್ತಿಕವಾಗಿ ನಮಗೆ ಪ್ರೀತಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ‌ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗುವ ಬಗೆಗಿನ ಊಹಾಪೋಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ಈ ಭಾಗದ ಪ್ರಬಲ ಹಿಂದುಳಿದ ನಾಯಕ. ಅವರನ್ನು ಪಕ್ಷಕ್ಕೆ ಸ್ವಾಗತ ಮಾಡಿದರೆ ತಪ್ಪು, ಬರಬೇಡ ಅಂದರೂ ತಪ್ಪಾಗುತ್ತದೆ. ಫೋನ್‌ನಲ್ಲಿ ಹಲವು ಸಲ ಮಾತನಾಡಿದ್ದೇವೆ. ಆದರೆ ಜೆಡಿಎಸ್ ಸೇರ್ಪಡೆ ಸಂಬಂಧ ಯಾವುದೇ ಚರ್ಚೆ ಆಗಿಲ್ಲ ಎಂದರು.

ಜೆಡಿಎಸ್ ಸೇರ್ಪಡೆ ಆಗುವವರ ಪಟ್ಟಿ ದೊಡ್ಡದಿದೆ. ಅದನ್ನು ಈಗಲೇ ಬಹಿರಂಗ ಪಡಿಸುವುದಿಲ್ಲ. ಜೆಡಿಎಸ್ ಬರುವವರು ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಆಗುವಂತೆ ಕೋರುತ್ತೇನೆ ಎಂದು ಅವರು ಹೇಳಿದರು.

ಡಿಸೆಂಬರ್ ಡೆಡ್‌ಲೈನ್ ಹಾಕಿರುವುದು ಏಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ನಮ್ಮಲ್ಲಿ ಎಷ್ಟು ಮಾಲಿದೆ ಎಂಬುದನ್ನು ನೋಡಿಕೊಳ್ಳಬೇಕು. ಹೀಗಾಗಿ ಡಿಸೆಂಬರ್ ಒಳಗೆ ಜೆಡಿಎಸ್ ಸೇರ್ಪಡೆ ಬಗ್ಗೆ ಖಚಿತಪಡಿಸಲು ಹೇಳಿದ್ದೇವೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಗುರಿ ಒಂದೇ, ಕಾಂಗ್ರೆಸ್ ಅಧಿಕಾರದಿಂದ ದೂರ ಇಡುವುದು ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ್ನು ಸೋಲಿಸಬೇಕು ಓಕೆ, ಬಿಜೆಪಿಯವರೇನು ನಮ್ಮ ಚಿಕ್ಕಪ್ಪ ಅಥವಾ ದೊಡ್ಡಪ್ಪನ ಮಕ್ಕಳಾ..ಅವರು ಕಂಪನಿ ಸರ್ಕಾರದವರು, ಇವರೂ ಕಂಪನಿ ಸರ್ಕಾರದವರು. ಕನ್ನಡಕ್ಕೆ ಕೈ ಎತ್ತು ಎಂಬುದು ನಮ್ಮ ನಿಲುವು, ನಮ್ಮದು ಕನ್ನಡಿಗರ ಪಕ್ಷ ಎಂದು ಹೇಳಿದರು.

Share This Article