ಅಕ್ರಮ ನೇಮಕಾತಿ ಸಿಇಓ ಆತ್ಮಹತ್ಯೆಗೆ ಕಾರಣವಾಯಿತೇ?

khushihost
ಅಕ್ರಮ ನೇಮಕಾತಿ ಸಿಇಓ ಆತ್ಮಹತ್ಯೆಗೆ ಕಾರಣವಾಯಿತೇ?

ಬೆಳಗಾವಿ, 25: ಬೆಳಗಾವಿ ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆನಂದ ಅವರು ಕ್ಯಾಂಪ್ ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು ಆತ್ಮಹತ್ಯೆಗೆ ಅಕ್ರಮ ನೇಮಕಾತಿ ಕಾರಣ ಎಂದು ಊಹಿಸಲಾಗುತ್ತಿದೆ.

ದಂಡು ಮಂಡಳಿಯಲ್ಲಿ ಇತ್ತೀಚಿಗೆ ಖಾಲಿಯಿದ್ದ ನಾಲ್ಕನೇ ದರ್ಜೆ ಸೇರಿದಂತೆ 30 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ದೂರುದಾರರೊಬ್ಬರು ಸಿಬಿಐಗೆ ಮಾಹಿತಿ ನೀಡಿ, ನಾಲ್ಕನೇ ದರ್ಜೆಯ ಹುದ್ದೆಗೆ 20 ಲಕ್ಷ ರೂಪಾಯಿ ಪಡೆಯಲಾಗಿದೆ ಎಂದು ಆರೋಪಿಸಿದ್ದರು. ಕೆಲವರು ಅರ್ಧ ಹಣ ನೀಡಿ ಆಯ್ಕೆಯಾಗಿದ್ದಾರೆ. ಇವರಿಂದ ಉಳಿದ ಮೊತ್ತ ನೀಡುವ ಕುರಿತು ಬಾಂಡ್ ಪೇಪರ್ ನಲ್ಲಿ ಬರೆಸಿಕೊಳ್ಳಲಾಗಿದೆ. ಈ ಕಾಗದಗಳೆಲ್ಲ ಸಿಇಓ ಬಳಿಯಿವೆ ಎಂದು ಹೇಳಿದ್ದರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ವ್ಯಕ್ತಿಯೊಬ್ಬರು ನೀಡಿದ ಖಾಸಗಿ ದೂರಿನ ಹಿನ್ನಲೆಯಲ್ಲಿ ಸಿಬಿಐ ತಂಡ ಇತ್ತೀಚಿಗೆ ದಂಡು ಮಂಡಳಿ ಆಡಳಿತ ಕಚೇರಿಯ ಮೇಲೆ ದಾಳಿ ಮಾಡಿತ್ತು. ಅದಕ್ಕೂ ಮೊದಲು ಸಿಇಓ ಅವರ ಮನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಅರ್ಧ ಹಣ ನೀಡಿ ಉದ್ಯೋಗ ಪಡೆದುಕೊಂಡವರು ಉಳಿದ ಮೊತ್ತ ನೀಡುವ ಕುರಿತು ಭರವಸೆಗೆ ನೀಡಿದ್ದ ಬಾಂಡ್ ಪೇಪರ್ ಗಳು ಪತ್ತೆಯಾಗಿದ್ದವು ಎನ್ನಲಾಗಿದ್ದು ಅವುಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲವೇ ದಿನಗಳ ಹಿಂದೆ ಸಿಬಿಐ ದಾಳಿ ಮಾಡಿದ್ದರೂ  ಮೂರು ತಿಂಗಳಿಂದ ಸಿಬಿಐ ಗುಪ್ತವಾಗಿ ಇಲ್ಲೇ ಬೀಡು ಬಿಟ್ಟು ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ. ಹೊಸದಾಗಿ ನೇಮಕಾತಿಗೊಂಡವರನ್ನೂ ಸಿಬಿಐ ವಿಚಾರಣೆಗೊಳಪಡಿಸಲಿದೆ ಎಂದು ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಸಿಇಓ ಆನಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Share This Article