ರಸ್ತೆ ಬದಿ ನಿಂತವರ ಮೇಲೆ ಬಿತ್ತು ಟಿಪ್ಪರ್; ಒಂದೇ ಕುಟುಂಬದ ಐವರ ದಾರುಣ ಸಾವು

khushihost
ರಸ್ತೆ ಬದಿ ನಿಂತವರ ಮೇಲೆ ಬಿತ್ತು ಟಿಪ್ಪರ್; ಒಂದೇ ಕುಟುಂಬದ ಐವರ ದಾರುಣ ಸಾವು

ಬೀಳಗಿ, ಎ 15: ರಸ್ತೆಯ ಪಕ್ಕದಲ್ಲಿ ನಿಂತವರ ಮೇಲೆ ಟಿಪ್ಪರ್ ಮಗುಚಿ ಬಿದ್ದಿದ್ದರಿಂದ ಒಂದೇ ಕುಟುಂಬದ ಐವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ನಿಹಾಳ ಸಮೀಪದ ಕಟ್ಟಿಗ್ಯಾನಮಡ್ಡಿ ಸಮೀಪದಲ್ಲಿ ಯತ್ನಟ್ಟಿ ಕ್ರಾಸ್ ಬಳಿ ಈ ದುರಂತ ನಡೆದಿದೆ.

ಮೃತರನ್ನು ಬಾದರದಿನ್ನಿ ಗ್ರಾಮದ ವೆಂಕಪ್ಪ ಶಿವಪ್ಪ ತೋಳಮಟ್ಟಿ(70) ಯಲ್ಲವ್ವ ವೆಂಕಪ್ಪ ತೋಳಮಟ್ಟಿ(60) ಪುಂಡಲೀಕ ತೋಳಮಟ್ಟಿ(35), ಗಿರಿಸಾಗತ ನಿವಾಸಿ ಅಶೋಕ ಬೊಮ್ಮಣ್ಣವರ( 45) ಅಶೋಕ ಪತ್ನಿ ನಾಗವ್ವ (40) ಎಂದು ಗುರುತಿಸಲಾಗಿದೆ.

ಮೃತಪಟ್ಟ ಐವರೂ ಹೊಲದಲ್ಲಿ ಕೆಲಸ ಮುಗಿಸಿಕೊಂಡು ತಮ್ಮೂರು ಬಾದರದಿನ್ನಿಗೆ ಹೋಗಲು ಯತ್ನಟ್ಟಿ ಕ್ರಾಸ್ ಬಳಿ ರಸ್ತೆಯ ಪಕ್ಕದಲ್ಲಿ ನಿಂತಿದ್ದಾಗ ಮಣ್ಣು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನದ ಟೈರ್ ಸ್ಫೋಟಗೊಂಡಿದ್ದರಿಂದ ರಸ್ತೆ ಪಕ್ಕದಲ್ಲಿ ನಿಂತಿದ್ದ ಐವರ ಮೇಲೆ ಟಿಪ್ಪರ್‌ ಮಗುಚಿದೆ. ಆಗ ಐವರು ಮಣ್ಣಿನಡಿ ಸಿಲುಕಿದರು ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ಮಣ್ಣಿನಡಿ ಸಿಲುಕಿದ್ದ ಶವ ಹೊರ ತಗೆದು, ಮರಣೋತ್ತರ ಪರೀಕ್ಷೆಗೆ ಬೀಳಗಿ ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Share This Article