ವರ್ತಕನಿಂದ 5 ಲಕ್ಷ ರೂ. ದೋಚಿದ್ದ ಸಬ್ ಇನ್ಸಪೆಕ್ಟರ್ ಸೇರಿ ನಾಲ್ವರು ಅಮಾನತು

khushihost
ವರ್ತಕನಿಂದ 5 ಲಕ್ಷ ರೂ. ದೋಚಿದ್ದ ಸಬ್ ಇನ್ಸಪೆಕ್ಟರ್ ಸೇರಿ ನಾಲ್ವರು ಅಮಾನತು

ಚಿಕ್ಕಮಗಳೂರು: ಚಿನ್ನಾಭರಣ ವರ್ತಕನನ್ನು ಬೆದರಿಸಿ ಪೊಲೀಸರೇ ಹಣ ಲೂಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈಗ ಸಬ್ ಇನ್ಸಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಜ್ಜಂಪುರ ಠಾಣೆಯ ಸಬ್ ಇನ್ಸಪೆಕ್ಟರ್ ಲಿಂಗರಾಜು, ಕಾನ್ ಸ್ಟೇಬಲ್ ಗಳಾದ ಸಖರಾಯಪಟ್ಟಣ ಠಾಣೆಯ ಧನಪಾಲ್ ನಾಯ್ಕ, ಕುದುರೆಮುಖ ಠಾಣೆಯ ಓಂಕಾರ ಮೂರ್ತಿ, ಲಿಂಗದಹಳ್ಳಿ ಠಾಣೆಯ ಶರತ ರಾಜ್ ಅಮಾನತುಗೊಂಡವರು.

ಈ ನಾಲ್ವರ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಚಿನ್ನಾಭರಣ ವ್ಯಾಪಾರಿ ಭಗವಾನ್ ಸಂಕ್ಲ ಅವರ ಪುತ್ರ ರೋಹಿತ ಸಂಕ್ಲ ನ. 17 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.

ಮೇ 11 ರಂದು ರೋಹಿತ್ ಎಂಬವರು ಕಾರ್ ನಲ್ಲಿ 2.450 ಕೆಜಿ ಚಿನ್ನಾಭರಣಗಳನ್ನು ದಾವಣಗೆರೆಯಿಂದ ಬೇಲೂರಿಗೆ ತೆಗೆದುಕೊಂಡು ಹೋಗುತ್ತಿದ್ದರು. ದಾರಿಯಲ್ಲಿ ಬುಕ್ಕಾಂಬುದಿ ಟೋಲ್ ಗೇಟ್ ಬಳಿ ಕಾರ್ ತಡೆದು ಸಬ್ ಇನ್ಸಪೆಕ್ಟರ್ ಮತ್ತಿಬ್ಬರು ಕಾರ್ ಹತ್ತಿದ್ದು ಚಿನ್ನಾಭರಣ ಇರುವುದರಿಂದ ಕಳ್ಳ ಸಾಗಾಣಿಕೆ ಕೇಸ್ ದಾಖಲಿಸುವುದಾಗಿ ಹೇಳಿ 10 ಲಕ್ಷ ರೂಪಾಯಿ ನೀಡಿದರೆ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ರೋಹಿತ್ ಅವರು ಅಜ್ಜಂಪುರದ ಚಿನ್ನಾಭರಣ ವ್ಯಾಪಾರಿಯಿಂದ 5 ಲಕ್ಷ ರೂ. ಪಡೆದು ಪೊಲೀಸರಿಗೆ ಕೊಟ್ಟಿದ್ದಾರೆ. ಜಿಎಸ್‌ಟಿ ಬಿಲ್ ಗಳನ್ನು ತೋರಿಸಿದರೂ ಚಿನ್ನ ಅಕ್ರಮ ಸಾಗಾಣಿಕೆ ಮಾಡುತ್ತಿರುವುದಾಗಿ ಬೆದರಿಕೆ ಹಾಕಿ ಹಣ ಪಡೆದುಕೊಂಡಿದ್ದಾರೆ. ಬೇರೆಯವರಿಗೆ ವಿಷಯ ತಿಳಿಸಿದರೆ ವ್ಯಾಪಾರಕ್ಕೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ರೋಹಿತ್ ತಂದೆ ದೂರು ನೀಡಿದ ನಂತ ಪರಿಶೀಲನೆ ನಡೆಸಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.

Share This Article