ಶಬರಿಮಲೆ ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

khushihost
ಶಬರಿಮಲೆ ಯಾತ್ರಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

ಬೆಂಗಳೂರು, ೨೩- ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಆರಂಭವಾಗಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ನಿರ್ಬಂಧಗಳ ಕಾರಣಕ್ಕೆ ಬಹಳಷ್ಟು ಭಕ್ತರಿಗೆ ದರ್ಶನ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದು, ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.

ಹೀಗಾಗಿ ಅಯ್ಯಪ್ಪ ಸ್ವಾಮಿ ಭಕ್ತರು ಅತ್ಯುತ್ಸಾಹದಿಂದ ಮಾಲೆ ಹಾಕುತ್ತಿದ್ದು, ಸ್ವಾಮಿಯ ದರ್ಶನಕ್ಕೆ ಶಬರಿಮಲೆಗೆ ತೆರಳಲು ಕಾತರರಾಗಿದ್ದಾರೆ. ಮೈ ಕೊರೆಯುವ ಚಳಿಯಲ್ಲಿಯೂ ಸಹ ಮಾಲೆ ಧರಿಸಿದವರು ನೇಮಗಳನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.

ಈ ಮಧ್ಯೆ ರಾಜ್ಯ ಆರೋಗ್ಯ ಇಲಾಖೆ ಶಬರಿಮಲೆ ಯಾತ್ರಾರ್ಥಿಗಳಿಗೆ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿದೆ. ಉಸಿರಾಟದ ತೊಂದರೆ, ಹೃದ್ರೋಗ, ಆಸ್ತಮಾ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಟ್ಟ ಏರಬಾರದು ಎಂದು ಸಲಹೆ ನೀಡಲಾಗಿದೆ.

ಹಾಗೆಯೇ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದರೆ ಅಂತವರು ಹೆಚ್ಚು ಪ್ರಯಾಣ ಮಾಡಬಾರದು ಎಂದು ತಿಳಿಸಲಾಗಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು ವೈದ್ಯರು ಸೂಚಿಸಿರುವ ಔಷಧಗಳನ್ನು ಹಾಗೂ ಚಿಕಿತ್ಸಾ ದಾಖಲೆಗಳನ್ನು ತಮ್ಮೊಂದಿಗೆ ಸದಾ ಕಾಲ ಹೊಂದಿರಬೇಕು ಎಂದು ತಿಳಿಸಲಾಗಿದೆ.

ಅಲ್ಲದೇ ತಾವು ಸೇವಿಸುತ್ತಿರುವ ಔಷಧಿ, ಮಾತ್ರೆಗಳನ್ನು ನಿಗದಿತ ಸಮಯದಲ್ಲಿ ತೆಗೆದುಕೊಳ್ಳಬೇಕು. ಬೆಟ್ಟ ಏರಲು ದೈಹಿಕ ಸಾಮರ್ಥ್ಯ ರೂಢಿಸಿಕೊಳ್ಳುವ ಸಲುವಾಗಿ ಯಾತ್ರೆಯ ಎರಡು ವಾರಕ್ಕೂ ಮುನ್ನ ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಗಳ ಕಾಲ ಓಟ ಅಥವಾ ನಡಿಗೆ ಮಾಡುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

Share This Article