ಗದಗ ಹತ್ಯಾಕಾಂಡ ಬಯಲು; ಮಗನಿಂದಲೇ ತಂದೆ-ತಾಯಿ ಕೊಲೆಗೆ ಸುಪಾರಿ!

khushihost
ಗದಗ ಹತ್ಯಾಕಾಂಡ ಬಯಲು; ಮಗನಿಂದಲೇ ತಂದೆ-ತಾಯಿ ಕೊಲೆಗೆ ಸುಪಾರಿ!

ಗದಗ, ಎ.೨೧: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆಲ ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಮನೆಯ ಮಗನೇ ತಂದೆ, ತಾಯಿಯನ್ನು ಮುಗಿಸಲು ಸುಪಾರಿ ನೀಡಿರುವ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಪ್ರಕರಣದ ಸಂಬಂಧ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದ ಭೀಕರ ಪ್ರಕರಣದಲ್ಲಿ ನಾಲ್ವರ ಕೊಲೆಯಾಗಿತ್ತು. ಪ್ರಕಾಶ ಬಾಕಳೆ ಅವರ ಮೊದಲ‌ ಪತ್ನಿಯ ಹಿರಿಯ ಮಗ ವಿನಾಯಕ ಬಾಕಳೆಯೇ ಕೊಲೆಗೆ ಸುಪಾರಿ ನೀಡಿದ್ದಾಗಿ ತಿಳಿದು ಬಂದಿದೆ.

ವಿನಾಯಕ ಬಾಕಳೆ ತನ್ನ ಕುಟುಂಬದವರನ್ನು ಕೊಲ್ಲಲು ಫೈರೋಜ ಖಾಜಿ ಎಂಬವನಿಗೆ ಸುಪಾರಿ ನೀಡಿದ್ದ, 65 ಲಕ್ಷ ರೂ.ಗೆ ಮಾತುಕತೆ ನಡೆಸಿ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದ. ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರನ್ನು ಟಾರ್ಗೆಟ್ ಮಾಡಿ ಸುಪಾರಿ ನೀಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆ ಕಿಟಕಿಯ ಗಾಜು ಒಡೆದು ನುಗ್ಗಿದ್ದ ಆರೋಪಿಗಳು ಇವರೇ ಬಾಕಳೆ ದಂಪತಿಗಳು ಎಂದು ಅವರ ಮನೆಗೆ ಬಂದಿದ್ದ ಸಂಬಂಧಿಕರಾದ ಪರಶುರಾಮ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಅವರನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಆಗ ಗದ್ದಲ ಕೇಳಿ ಬೇರೆ ಕಡೆ ಮಲಗಿದ್ದ ಕಾರ್ತಿಕ ಬಾಕಳೆ (28) ಏನಾಗಿದೆ ಎಂದು ನೋಡಲು ಹೋದಾಗ ಆತನನ್ನು ಸಹ ಕೊಲೆ ಮಾಡಲಾಗಿತ್ತು.

ಈ ಕುರಿತು ಉತ್ತರ ವಲಯ ಐಜಿಪಿ ವಿಕಾಸ ಕುಮಾರ ಪತ್ರಕರ್ತರಿಗೆ ಮಾಹಿತಿ ನೀಡಿದ್ದು ” ದೂರುದಾರ ಪ್ರಕಾಶ ಬಾಕಳೆ ಅವರ ಮೊದಲ ಹೆಂಡತಿಯ ಹಿರಿಯ ಮಗ ವಿನಾಯಕ ಬಾಕಳೆ ಪ್ರಮುಖ ಆರೋಪಿ. ಜೊತೆಗೆ ಸುಪಾರಿ ಪಡೆದ ಗದಗ ರಾಜೀವ ಗಾಂಧಿ ನಗರ ನಿವಾಸಿ ಫಿರೋಜ ನಿಸಾರಅಹ್ಮದ್ ಖಾಜಿ (29), ಹುಡ್ಕೋ ನಿವಾಸಿ ಜಿಶಾನ್ ಮೆಹಬೂಬಅಲಿ ಖಾಜಿ (24) ಹಾಗೂ ಮಹಾರಾಷ್ಟದ ಮಿರಜ ನಿವಾಸಿಗಳಾದ ಸಾಹಿಲ್ ಅಷ್ಪಾಕ ಖಾಜಿ (19), ಸೋಹೆಲ್ ಅಷ್ಪಾಕ ಖಾಜಿ (19), ಸುಲ್ತಾನ್ ಜಿಲಾನಿ ಖಾಜಿ (23), ಮಹೇಶ ಜಗನ್ನಾಥ ಸಾಳೋಂಕೆ (21), ವಾಹಿದ ಲಿಯಾಕತ್ ಬೇಪಾರಿ (21)ಯನ್ನು ಬಂಧಿಸಲಾಗಿದೆ ” ಎಂದು ತಿಳಿಸಿದ್ದಾರೆ.

ತಂದೆ ಪ್ರಕಾಶ ಬಾಕಳೆ ಹಾಗೂ ತಂದೆ ವಿನಾಯಕ ಬಾಕಳೆ ಮಧ್ಯೆ ಆಸ್ತಿ ವಿಚಾರವಾಗಿ ಕೆಲ ತಿಂಗಳ ಹಿಂದೆ ಜಗಳ ನಡೆದಿತ್ತು. ತಂದೆಗೆ ಗೊತ್ತಿಲ್ಲದಂತೆ ವಿನಾಯಕ ಆಸ್ತಿಗಳನ್ನು ಮಾರಿದ್ದರಿಂದ ಪ್ರಕಾಶ ಬಾಕಳೆ ಆಕ್ರೋಶಗೊಂಡಿದ್ದರು. ಈ ವಿಚಾರವಾಗಿ ಇಬ್ಬರ ಮಧ್ಯೆ ಕಲಹ ನಡೆದಿತ್ತು. ಇದೇ ಕಾರಣಕ್ಕೆ ವಿನಾಯಕ ಕೊಲೆಗೆ ಸುಪಾರಿ ನೀಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ ಎಂದು ವಿಕಾಸ ಕುಮಾರ ಮಾಹಿತಿ ನೀಡಿದರು.

ಕಾರ್ ಮಾರಾಟ ಮಾಡುವ ಎಜೆಂಟರಾದ ಫಿರೋಜ ಹಾಗೂ ಜಿಶಾನನನ್ನು ಸಂಪರ್ಕಿಸಿ ಪ್ರಮುಖ ಆರೋಪಿ ವಿನಾಯಕ ಬಾಕಳೆ ಸುಪಾರಿ ಕೊಟ್ಟಿದ್ದಾನೆ. ಒಟ್ಟು 65 ಲಕ್ಷ ರೂಪಾಯಿಗೆ ಸುಪಾರಿ ಮಾತುಕತೆ ಆಗಿದೆ. ಆ ಪೈಕಿ 2 ಲಕ್ಷ ರೂ. ಮುಂಗಡವಾಗಿ ಕೊಟ್ಟಿದ್ದಾನೆ. ಸುಪಾರಿ ಪಡೆದ ಈ ಇಬ್ಬರೂ ಮಿರಜನಿಂದ ಬಾಡಿಗೆ ಹಂತಕರನ್ನು ಕರೆಯಿಸಿಕೊಂಡಿದ್ದಾರೆ. ಈ ಎಂಟು ಜನ ಆರೋಪಿಗಳು ಕಡಿಮೆ ಸಮಯದಲ್ಲಿ ಹೊಂಚು ಹಾಕಿ ಕೊಲೆ ಮಾಡಿದ್ದಾರೆ . ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಗದಗ ನಗರದಲ್ಲಿಯೇ ಬಂಧಿಸಲಾಗಿದ್ದು ಇನ್ನುಳಿದ ಐವರನ್ನು ಮೀರಜನಲ್ಲಿ ಬಂಧಿಸಿ ಕರೆತರಲಾಗಿದೆ.

ಕೊಲೆಗೆ ಸುಪಾರಿ ಕೊಟ್ಟಿದ್ದ ವಿನಾಯಕ ಬಾಕಳೆ, ಮನೆಯಲ್ಲಿರುವ ಎಲ್ಲರನ್ನೂ ಕೊಲೆ ಮಾಡಲು ಸೂಚಿಸಿದ್ದ. ದುರ್ದೈವದಿಂದ ಆವತ್ತು ಮನೆಯಲ್ಲಿ ಸಂಬಂಧಿಗಳಾದ ಕೊಪ್ಪಳ ಭಾಗ್ಯನಗರದ ಪರಶುರಾಮ, ಲಕ್ಷ್ಮೀ ಹಾಗೂ ಅವರ ಮಗಳು  ಆಕಾಂಕ್ಷಾ ಉಳಿದುಕೊಂಡಿದ್ದರು. ಗೊತ್ತಿಲ್ಲದೇ ಅವರೆಲ್ಲ ಬಾಡಿಗೆ ಹಂತಕರಿಗೆ ಬಲಿಯಾದರು. ಪ್ರಕಾಶ ಹಾಗೂ ಸುನಂದಾ ಬಾಕಳೆ ದಂಪತಿ ತಮ್ಮ ಕೊಠಡಿಯ ಬಾಗಿಲು ತೆಗೆಯದೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಬದುಕುಳಿದಿದ್ದಾರೆ. ಘಟನೆ ದಿನ ಪ್ರಕಾಶ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರಿಂದ ಅವರು ಸಾವಿನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಪ್ರಕಾಶ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ ಜೊತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ(55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ(16) ಅವರನ್ನು ಹತ್ಯೆ ಮಾಡಿದ್ದರು.

ವಿನಾಯಕ ಬಾಕಳೆ ಕಿರಿಯ ಸಹೋದರ ದತ್ತಾತ್ರೇಯ ಬಾಕಳೆ ನಕಲಿ ಚಿನ್ನ ಅಡವಿಟ್ಟ ಪ್ರಕರಣದಲ್ಲಿ ಆರೋಪಿಯಾಗಿದ್ದು, ಸದ್ಯ ಆತ ತಲೆಮರೆಸಿಕೊಂಡಿದ್ದಾನೆ. ಇಂಥ ಸಮಯದಲ್ಲಿ ಪ್ರಕಾಶ ಮತ್ತು ಸುನಂದಾ ಬಾಕಳೆ ಕೊಲೆಯಾದರೆ ಸಹಜವಾಗಿ ದತ್ತಾತ್ರೇಯನ ಮೇಲೆ ಅನುಮಾನ ಮೂಡುತ್ತದೆ ಎನ್ನುವ ಲೆಕ್ಕಾಚಾರದಿಂದ ವಿನಾಯಕ ಸುಪಾರಿ ಕೊಟ್ಟಿದ್ದಾನೆ. ಆದರೆ ಪೊಲೀಸರ ಚಾಣಾಕ್ಷತನದಿಂದ ವಿನಾಯಕ ಬಲೆಗೆ ಬಿದ್ದಿದ್ದಾನೆ.

ಸುಪಾರಿ ಕೊಟ್ಟಿದ್ದ ವಿನಾಯಕ ಬಾಕಳೆ ಕೊಲೆ ನಡೆದ ದಿನವೂ ಅದೇ ಮನೆಯಲ್ಲಿದ್ದ. ಕೊಲೆಯಾದ ಬೆಳಿಗ್ಗೆಯಿಂದ ಎ. 21 ರ ವರೆಗೂ ಪ್ರಕಾಶ-ಸುನಂದಾ ಬಾಕಳೆ ದಂಪತಿಯ ಜೊತೆಯಲ್ಲೇ ಇದ್ದ. ಪೊಲೀಸರು ತನಿಖೆಗೆ ಬಂದಾಗ, ಗಣ್ಯರು ಸಾಂತ್ವನ ಹೇಳಲು ಬಂದಾಗಲೂ ಯಾರಿಗೂ ಅನುಮಾನ ಬರದಂತೆ ಅದೇ ಮನೆಯಲ್ಲೆ ಇದ್ದ. ಈಗ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ‌ ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ತೆಗೆದುಕೊಂಡು ಹೋಗುವ ಡೀಲ್ ಸಹ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article