ಜಲೀಲ ಕೊಲೆ; ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿ, ಮಂಗಳೂರಿನಲ್ಲಿ ಪ್ರತಿಭಟನೆ

khushihost
ಜಲೀಲ ಕೊಲೆ; ಬೆಳಗಾವಿ ಅಧಿವೇಶನದಲ್ಲಿ ಪ್ರತಿಧ್ವನಿ, ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು: ಡಿಸೆಂಬರ್ 24ರಂದು ಮಂಗಳೂರಿನ ಸುರತ್ಕಲ್‍ ನ ಕಾಟಿಪಳ್ಳದಲ್ಲಿ ನಡೆದಿದ್ದ ಅಬ್ದುಲ್​ ಜಲೀಲ ಅವರ ಬರ್ಬರ ಕೊಲೆ ಪ್ರಕರಣದಲ್ಲಿ ದಿ. 27 ರಂದು ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

28 ವರ್ಷದ ಲಕ್ಷ್ಮೀಶ ದೇವಾಡಿಗ ಎಂಬವನು ಬಂಧಿತ ಆರೋಪಿಯಾಗಿದ್ದು ಇದರೊಂದಿಗೆ ಆರೋಪಗಳ ಬಂಧನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕೃಷ್ಣಪುರ 4ನೇ ಬ್ಲಾಕ್‌ ನಿವಾಸಿಯಾಗಿರುವ ಲಕ್ಷ್ಮೀಶ ದೇವಾಡಿಗ ಈ ಹಿಂದೆ ಜಲೀಲ ಅಂಗಡಿಗೆ ಹೋಗಿ ಜಗಳವಾಡಿದ್ದ. ಹಿಂದೂ ಧರ್ಮದ ಮಹಿಳೆಯೊಂದಿಗೆ ಜಲೀಲ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಚಾರಕ್ಕೆ ಆರೋಪಿ ಲಕ್ಷ್ಮೀಶ ದೇವಾಡಿಗ ಅಂಗಡಿಗೆ ಹೋಗಿ ಜಲೀಲನ ಜೊತೆ ಗಲಾಟೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲಕ್ಷ್ಮೀಶ ದೇವಾಡಿಗನನ್ನು ಬಂಧನ ಮಾಡಿ ವಿಚಾರಣೆಗೊಳಪಡಿಸಿದ್ದಾರೆ

ಮಾಧ್ಯಮಗಳು ಮೌನ ವಹಿಸಿದ್ದರೂ ಸಹ
ಅಬ್ದುಲ್​ ಜಲೀಲ​ ಕೊಲೆ ಪ್ರಕರಣ​ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಇದೀಗ ಜಲೀಲ್​ ಹತ್ಯೆ ಖಂಡಿಸಿ ಎಸ್ ವೈಎಸ್, ಎಸ್​ಎಸ್​​ಎಫ್​ ಪ್ರತಿಭಟನೆಗಿಳಿದಿವೆ. ಇಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಎಸ್ ವೈಎಸ್, ಎಸ್​ಎಸ್​​ಎಫ್​ ಸಂಘಟನೆಗಳು ಪ್ರತಿಭಟನೆಗಿಳಿದವು. ಜಲೀಲ ಕೊಲೆ ಪ್ರಕರಣದಲ್ಲಿ ತಾರತಮ್ಯ ಆಗಿದೆ ಎಂದು ಪೊಲೀಸ್ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕ್ಲಾಕ್ ಟಾವರ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಮಂಗಳೂರಿನ ಕಾಟಿಪಳ್ಳದ ನಾಲ್ಕನೇ ಬ್ಲಾಕ್​​ನಲ್ಲಿ 40 ವರ್ಷದ‌ ಅಬ್ದುಲ್​ ಜಲೀಲ ಎಂಬ ವ್ಯಕ್ತಿಯನ್ನು ಡಿಸೆಂಬರ 24ರಂದು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಶೈಲೇಶ ಪೂಜಾರಿ, ಸವಿನ ಕಾಂಚನ, ಪವನ ಅಲಿಯಾಸ್ ಪಚ್ಚು ಎನ್ನುವ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜಲೀಲ್​ ಕೊಲೆ ಬೆನ್ನಲ್ಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿತ್ತು. ಅಲ್ಲದೇ ಮದ್ಯ ಮಾರಾಟವನ್ನೂ ಸಹ ಡಿಸೆಂಬರ್ 29ರ ವರೆಗೆ ನಿಷೇಧಿಸಲಾಗಿದೆ.

Share This Article