ಬಿಮ್ಸನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

khushihost
ಬಿಮ್ಸನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿ, ಅಗಸ್ಟ 19- ಬೆಳಗಾವಿ ವೈದ್ಯಕೀಯ ಸಂಸ್ಥೆಯ (ಬಿಮ್ಸ) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿಯೊಬ್ಬರು ಹಾಸ್ಟೆಲನ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು ಮೂಲದ 27 ವರುಷದ ಪ್ರಿಯಾ ಬಿಮ್ಸನಲ್ಲಿ ಸ್ನಾತಕೋತ್ತರ ಅಂತಿಮ ವರುಷದ ವಿದ್ಯಾರ್ಥಿಯಾಗಿದ್ದರು. ಸೋಮವಾರ ಸಂಜೆ 4.30ಕ್ಕೆ ತಮ್ಮ ಕರ್ತವ್ಯ ಮುಗಿಸಿ ಆಸ್ಪತ್ರೆ ಆವರಣದಲ್ಲಿರುವ ತಮ್ಮ ಹಾಸ್ಟೆಲಗೆ ಹೋಗಿದ್ದರು. ಸಂಜೆ ಹಾಸ್ಟೆಲ್ ಸಹಪಾಠಿಗಳು ಅವರ ಕೋಣೆಗೆ ಹೋಗಿದ್ದಾಗ ಅವರು ಹಾಸಿಗೆಯ ಮೇಲೆ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಲಾಯಿತು, ಅಲ್ಲಿ ಅವರನ್ನು ಮೃತರೆಂದು ತಿಳಿಸಲಾಯಿತು.

ಪ್ರಿಯಾ ಮಾನಸಿಕ ಖಿನ್ನತೆಗೆ ವೈದ್ಯಕೀಯ ಉಪಚಾರ ಪಡೆಯುತ್ತಿದ್ದರು. ಪ್ರತಿದಿನ ತೆಗೆದುಕೊಳ್ಳುವ ಮೆಡಿಸಿನ್ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಿರುವ ಸಾಧ್ಯತೆಯಿದೆ. ಅದೇ ಅವರ ಸಾವಿಗೆ ಕಾರಣವಾಗಿರಲೂ ಬಹುದು ಎಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಭೆಟ್ಟಿ ನೀಡಿದ ಬಿಮ್ಸ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಪ್ರಿಯಾ ಅವರು ಬೆಂಗಳೂರು ಮೂಲದವರು. ಈ ಹಿಂದೆ ಬೆಂಗಳೂರಿನಲ್ಲಿ ಅವರು ಆತ್ಮಹತ್ಯೆಗೆ ಒಮ್ಮೆ ಯತ್ನಿಸಿದ್ದರು. ಬ್ಲೇಡ್ ಮುಂತಾದ ಹರಿತ ವಸ್ತುಗಳಿಂದ ತಮ್ಮ ದೇಹವನ್ನು ಕತ್ತರಿಸಿಕೊಂಡಿದ್ದರು. ಬೆಂಗಳೂರು ವೈದ್ಯಕೀಯ ಕಾಲೇಜ (ಬಿಎಂಸಿ) ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು ಎಂದೂ ಡಾ. ಶೆಟ್ಟಿ ತಿಳಿಸಿದರು.

ನಗರದ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article