ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ನೈನಿತಾಲ್ : ಇಲ್ಲಿದೆ ಖರ್ಚು ವೆಚ್ಚಗಳ ವಿವರ

khushihost
ಚಳಿಗಾಲದಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ನೈನಿತಾಲ್ : ಇಲ್ಲಿದೆ ಖರ್ಚು ವೆಚ್ಚಗಳ ವಿವರ

ಉತ್ತರಾಖಂಡದ ನೈನಿತಾಲ್ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸುತ್ತಲೂ ಕಣಿವೆಗಳಿಂದ ಆವೃತವಾಗಿರುವ ನೈನಿತಾಲ್‌ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ನೈನಿತಾಲ್‌ನ ನೈಸರ್ಗಿಕ ಚೆಲುವು ಎಂಥವರನ್ನೂ ಕಣ್ಸೆಳೆಯುವಂತಿದೆ.

ಚಳಿಗಾಲದಲ್ಲಂತೂ ನೈನಿತಾಲ್‌ ಹಿಮವನ್ನೇ ಹೊದ್ದು ಮಲಗುತ್ತದೆ. ನೀವು ಕೂಡ ಅಲ್ಲಿಗೆ ಹೋಗಲು ಬಯಸಿದ್ರೆ ಚಳಿಗಾಲ ಅತ್ಯಂತ ಸೂಕ್ತವಾದ ಸಮಯ. ನೈನಿತಾಲ್‌ ಪ್ರವಾಸದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ನೈನಿತಾಲ್ ತಲುಪುವುದು ಹೇಗೆ ?

ದೆಹಲಿಯಿಂದ ನೈನಿತಾಲ್‌ಗೆ 320 ಕಿಮೀ ದೂರವಿದೆ. ನೈನಿತಾಲ್ ತಲುಪಲು ನೇರ ವಿಮಾನ ಅಥವಾ ರೈಲು ಇಲ್ಲ. ನೈನಿತಾಲ್‌ಗೆ ಹತ್ತಿರದ ರೈಲು ನಿಲ್ದಾಣವೆಂದರೆ ಕತ್ಗೊಡಮ್. ನೀವು ರಾಜಧಾನಿ ದೆಹಲಿಯಿಂದ ಕತ್ಗೊಡಮ್‌ಗೆ ರೈಲಿನ ಮೂಲಕ ತೆರಳಬಹುದು. ಕತ್ಗೊಡಮ್‌ನಿಂದ ನೈನಿತಾಲ್‌ಗೆ ಅನೇಕ ಬಸ್‌ಗಳು ಮತ್ತು ಕ್ಯಾಬ್‌ಗಳು ಲಭ್ಯವಿರುತ್ತವೆ.

ನೈನಿತಾಲ್‌ಗೆ ಪ್ರಯಾಣ ವೆಚ್ಚ  

ದೆಹಲಿಯಿಂದ ನೈನಿತಾಲ್‌ಗೆ ಪ್ರಯಾಣಿಸಲು ಅತ್ಯಂತ ಕಡಿಮೆ ವೆಚ್ಚವಾಗುತ್ತದೆ. ಕತ್ಗೊಡಮ್‌ಗೆ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್‌ಗೆ ಹೆಚ್ಚೆಂದರೆ 200 ರೂಪಾಯಿ ಇದೆ. ಅಲ್ಲಿಂದ ನೈನಿತಾಲ್‌ಗೆ ಹೋಗಲು ಬಸ್ ದರ ಕೂಡ ಅಗ್ಗವಾಗಿದೆ.

ವಸತಿ ವೆಚ್ಚಗಳು

ಗಿರಿಧಾಮವಾಗಿದ್ದರೂ ನೈನಿತಾಲ್ ಅನ್ನು ಬಜೆಟ್‌ನಲ್ಲಿ ಸುತ್ತಾಡಬಹುದು. ನೈನಿತಾಲ್‌ನಲ್ಲಿ ಉಳಿಯಲು ಉತ್ತಮ ಹೋಟೆಲ್‌ಗಳಿವೆ. ಅವುಗಳ ದರ 500 ರೂಪಾಯಿಯಿಂದ ಆರಂಭವಾಗಿ  2000 ರೂಪಾಯಿಗಳವರೆಗಿದೆ (ಸಾಮಾನ್ಯ ದರ್ಜೆಯ ಹೋಟೆಲ್‌ ಗಳು).

ಊಟ-ಉಪಹಾರದ ವೆಚ್ಚ

ನೈನಿತಾಲ್‌ನಲ್ಲಿ ಆಹಾರವು ತುಂಬಾ ಅಗ್ಗ. ಸಸ್ಯಾಹಾರಿ ಮತ್ತು ಮಾಂಸಾಹಾರಿ, ಉತ್ತರ ಮತ್ತು ದಕ್ಷಿಣ ಭಾರತದ ಎಲ್ಲಾ ರೀತಿಯ ಆಹಾರಗಳು ದೊರೆಯುತ್ತವೆ. ನೈನಿತಾಲ್‌ನಲ್ಲಿ ನೀವು ಪಹಾಡಿ ಫುಡ್‌ ಅನ್ನು ಕೂಡ ಆನಂದಿಸಬಹುದು. ಪಹಾಡಿ ಆಹಾರವು ತುಂಬಾ ರುಚಿಕರವಾಗಿರುತ್ತದೆ, ಅಲ್ಲಿನ ವಿಶೇಷತೆಗಳಲ್ಲಿ ಇದೂ ಒಂದು.

ನೈನಿತಾಲ್‌ನಲ್ಲಿ ನೋಡಬೇಕಾದ ಸ್ಥಳಗಳು

ನೈನಿತಾಲ್‌ನ ಪ್ರತಿಯೊಂದು ಮೂಲೆಯೂ ಸೌಂದರ್ಯದಿಂದ  ಕಂಗೊಳಿಸುತ್ತದೆ. ಇಲ್ಲಿನ ನೈನಿ ಸರೋವರವನ್ನು ಪ್ರವಾಸಿಗರು ಹೆಚ್ಚು ಇಷ್ಟಪಡುತ್ತಾರೆ. ನೈನಿ ಸರೋವರದಲ್ಲಿ ಬೋಟಿಂಗ್ ಮಾಡಬಹುದು. ಸ್ನೋ ವ್ಯೂ ಪಾಯಿಂಟ್ ಮತ್ತು ಇಕೋ ಕೇವ್ ಗಾರ್ಡನ್ ಕೂಡ ಇಲ್ಲಿ ಬಹಳ ಸುಂದರವಾಗಿದೆ.

ಪ್ರವಾಸಕ್ಕೆ ಉತ್ತಮ ಸಮಯ‌ ಯಾವುದು ?

ನೈನಿತಾಲ್ ಪ್ರತಿ ಋತುವಿನಲ್ಲಿ ಸುಂದರವಾಗಿ ಕಂಡರೂ, ಚಳಿಗಾಲದಲ್ಲಿ ಹಿಮ ಬೀಳುವುದರಿಂದ ನೈನಿತಾಲ್ ಚೆಲುವು ಇಮ್ಮಡಿಯಾಗುತ್ತದೆ. ಡಿಸೆಂಬರ್‌ನಿಂದ ಮಾರ್ಚ‌ ವರೆಗೆ ಇಲ್ಲಿ ಹಿಮಪಾತವಿರುತ್ತದೆ. ಮೊದಲ ಹಿಮಪಾತ ಪ್ರಾರಂಭವಾದ ತಕ್ಷಣ ನೈನಿತಾಲ್ ಟಿಕೆಟ್‌ಗಳನ್ನು ಬುಕ್ ಮಾಡಿ.

ಸಾಹಸ ಚಟುವಟಿಕೆ

ನೈನಿತಾಲ್‌ನಲ್ಲಿ ನೀವು ಅನೇಕ ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಇಲ್ಲಿ ದೋಣಿ ಸವಾರಿಯ ಹೊರತಾಗಿ, ನೀವು ಪ್ಯಾರಾಗ್ಲೈಡಿಂಗ್, ಕುದುರೆ ಸವಾರಿ, ಟ್ರೆಕ್ಕಿಂಗ್‌ ಮತ್ತು ರಾಕ್ ಕ್ಲೈಂಬಿಂಗ್ ಕೂಡ ಮಾಡಲು ಅವಕಾಶವಿದೆ.

Share This Article