ಗುಜರಾತ್ ಮೆಟ್ರೋ ರೈಲು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ಉಗಿದ ಜನ; ವಿಡಿಯೋ ನೋಡಿ ನೆಟ್ಟಿಗರ ತರಾಟೆ

khushihost
ಗುಜರಾತ್ ಮೆಟ್ರೋ ರೈಲು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಗುಟ್ಕಾ ಉಗಿದ ಜನ; ವಿಡಿಯೋ ನೋಡಿ ನೆಟ್ಟಿಗರ ತರಾಟೆ

ಅಹಮದಾಬಾದ, ೧೭- ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಬಹುವಾಗಿ ಇಷ್ಟಪಡುತ್ತಾರೆ. ನಿಲ್ದಾಣದಲ್ಲಿನ ಸ್ವಚ್ಛತೆ, ಟ್ರಾಫಿಕ್ ಕಿರಿಕಿರಿ ಇಲ್ಲದೆ ತಾವು ಹೋಗಬೇಕಾದ ಸ್ಥಳವನ್ನು ಬಹುಬೇಗ ತಲುಪುವುದು ಇತ್ಯಾದಿಗಳ ಕಾರಣಕ್ಕೆ ಮಹಾನಗರಗಳಲ್ಲಿ ಮೆಟ್ರೋ ರೈಲಿಗೆ ಪ್ರಾಶಸ್ತ್ಯ ನೀಡುವುದು ಹೆಚ್ಚು.

ಜಗತ್ತಿನಾದ್ಯಂತ ನಗರಗಳಲ್ಲಿ ಅಲ್ಲದೇ ಬೆಂಗಳೂರು, ಕೊಲ್ಕತ್ತಾ, ದೆಹಲಿ, ಅಹ್ಮದಾಬಾದ ಮತ್ತು ಲಕ್ನೋದ ನಗರಗಳಲ್ಲಿ ಮೆಟ್ರೋ ರೈಲುಗಳು ಅಲ್ಲಿನ ಜನತೆಯ ಅವಿಭಾಜ್ಯ ಅಂಗಗಳಾಗಿವೆ. ಆದರೆ ಕೆಲವೊಂದು ವ್ಯಕ್ತಿಗಳ ದುರ್ವರ್ತನೆ ಅಸಹನೀಯವಾಗಿರುತ್ತದೆ. ಮದ್ಯಪಾನ ಮಾಡಿಕೊಂಡು ರೈಲು ಹತ್ತುವುದು, ಜೋರಾದ ದ್ವನಿಯಲ್ಲಿ ಮಾತನಾಡುವ ಮೂಲಕ ಅಕ್ಕಪಕ್ಕದ ಪ್ರಯಾಣಿಕರಿಗೆ ತೊಂದರೆ ನೀಡುವುದು ಹಾಗೂ ಪಾನ್ ಹಾಕಿಕೊಂಡು ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗಿಯುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.

ಇದೀಗ ಇಂಥವುದೇ ಒಂದು ವಿಡಿಯೋವನ್ನು ನೀಲೇಶ ಶಾ ಎಂಬವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಅಹ್ಮದಾಬಾದನ ಮೊಟೆರಾ ಸ್ಟೇಡಿಯಂ ಮೆಟ್ರೋ ನಿಲ್ದಾಣದಲ್ಲಿನ ವಿಡಿಯೋ ಇದಾಗಿದೆ. ಅಕ್ಟೋಬರ 6 ರಿಂದ ಆರಂಭಗೊಂಡ ಈ ನಿಲ್ದಾಣ ಕೆಲ ಪ್ರಯಾಣಿಕರ ವರ್ತನೆಯಿಂದ ಈಗಾಗಲೇ ಅದ್ವಾನವಾಗಿದೆ.

ಪ್ರಯಾಣಿಕರು ನಿಲ್ದಾಣದಲ್ಲಿ ಮನಬಂದಂತೆ ಗುಟ್ಕಾ ಉಗಿದಿದ್ದು, ಅಲ್ಲಲ್ಲಿ ಬಾಟಲಿಗಳು ಸಹ ಬಿದ್ದಿವೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ರೀತಿ ಮಾಡಿದ ಪ್ರಯಾಣಿಕರಿಗೆ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ.

Share This Article