ಬಿಜೆಪಿಗೆ ಒಳ ಹೊಡೆತ ಮೇ 13ರಂದು ಗೊತ್ತಾಗಲಿದೆ : ಶೆಟ್ಟರ್

khushihost
ಬಿಜೆಪಿಗೆ ಒಳ ಹೊಡೆತ ಮೇ 13ರಂದು ಗೊತ್ತಾಗಲಿದೆ : ಶೆಟ್ಟರ್

ಹುಬ್ಬಳ್ಳಿ : ಹುಬ್ಬಳ್ಳಿ ಕುಸುಗಲ್ ರಸ್ತೆ ಶಬರಿ ನಗರದ ಎಸ್.ಬಿ.ಐ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ ನಂ. 122 ರಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಕುಟುಂಬ ಸಮೇತವಾಗಿ ಬಂದು ಮತ ಚಲಾಯಿಸಿದರು.

ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಬಿರುಸಿನ ಮತದಾನವಾಗುತ್ತಿದೆ. ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಬಳಿಕ ಜನರಿಂದ ಹಿಂದಿಗಿಂತಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನರ ಉತ್ಸಾಹ ಗಮನಿಸಿದರೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

ಮನೆಮನೆಗೆ ಭೇಟಿ ನೀಡಿ ಮಂಗಳವಾರ ಪ್ರಚಾರ ನಡೆಸಿದಾಗ, ಜನರು ಸಹ ಉತ್ತಮವಾಗಿ ಸ್ಪಂದಿಸಿದ್ದಾರೆ. ಮತದಾರರಿಗೆ ಬಿಜೆಪಿ ಅಭ್ಯರ್ಥಿಯ ಮುಖ ಪರಿಚಯವೇ ಇಲ್ಲ. ಹಾಗಾಗಿ, ನನ್ನ ಗೆಲುವು ನಿಶ್ಚಿತ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಚುನಾವಣೆಯೇ ಹೊರತು, ಶೆಟ್ಟರ್ ಮತ್ತು ಕೇಂದ್ರದ ನಡುವಣ ಚುನಾವಣೆಯಲ್ಲ. ಬಿಜೆಪಿಯವರು ಪಕ್ಷ ಮುಖ್ಯ ಎನ್ನುತ್ತಾರೆ. ಆದರೆ, ಪಕ್ಷಕ್ಕೆ ವ್ಯಕ್ತಿಯೂ ಅಷ್ಟೇ ಮುಖ್ಯ. ಹಾಗಾದರೆ, ಇವರು ಪ್ರಧಾನಿ ಮೋದಿ ಅವರ ಭಾವಚಿತ್ರ ಇಟ್ಟುಕೊಂಡ ಯಾಕೆ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಈ ಚುನಾವಣೆಯಲ್ಲಿ ಒಳ ಹೊಡೆತ ಮತ್ತು ಹೊರ ಹೊಡೆತ ಭಾರೀ ಕೆಲಸ ಮಾಡಲಿದೆ. ಫಲಿತಾಂಶದ ದಿನ ಅದರ ಪರಿಣಾಮ ಗೊತ್ತಾಗಲಿದೆ ಎಂದು ಹೇಳಿದರು.

Share This Article