ವಿದ್ಯಾರ್ಥಿನಿಯನ್ನು ಎತ್ತಿ ಎಸೆದ ಕಿಡಿಗೇಡಿ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

khushihost
ವಿದ್ಯಾರ್ಥಿನಿಯನ್ನು ಎತ್ತಿ ಎಸೆದ ಕಿಡಿಗೇಡಿ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಮಂಗಳೂರು, ೧೮- ರಸ್ತೆ ಬದಿಯಲ್ಲಿ ನಿಂತಿದ್ದ ಮದರಸಾದ ವಿದ್ಯಾರ್ಥಿನಿಯನ್ನು ಕಿಡಿಗೇಡಿ ಯುವಕನೊಬ್ಬ ಎತ್ತಿ ಎಸೆದು, ಕ್ರೌರ್ಯ ಮೆರೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಿಡಗೇಡಿ ಯುವಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮದರಸಾ ಅವರಣದಲ್ಲಿ ಗುರುವಾರ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕಂಡು ಬಂದ ಸಂತ್ರಸ್ತ ವಿದ್ಯಾರ್ಥಿನಿಯನ್ನು ಫಾತಿಮಾ ಎಂದು ಗುರುತಿಸಲಾಗಿದೆ. ಆರೋಪಿ ಉದ್ಯಾವರದ ಸಿದ್ದೀಕ‌ ಎಂಬಾತ ಆಕೆಯ ಮೇಲೆ ಕ್ರೌರ್ಯ ಎಸಗಿದ್ದಾರೆ. ಬಾಲಕಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಯುವಕ ಮಾದಕ ವ್ಯಸನದ ಅಮಲಿನಿಂದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂಶಯ ವ್ಯಕ್ತವಾಗಿದೆ. ಘಟನೆಯ ವಿಡಿಯೋ ವೈರಲ್‌ ಆಗಿದ್ದು, ಕಿಡಿಗೇಡಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Share This Article