ಬಿಲ್ಕಿಸ್ ಬಾನು ಪ್ರಕರಣ : ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಮ ಕೋರ್ಟ ಸಮ್ಮತಿ

khushihost
ಬಿಲ್ಕಿಸ್ ಬಾನು ಪ್ರಕರಣ : ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಮ ಕೋರ್ಟ ಸಮ್ಮತಿ

ಹೊಸದಿಲ್ಲಿ: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು 14 ಜನರ ಸಂಹಾರ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ​​ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹೇಳಿದ್ದಾರೆ. ಪ್ರಕರಣದ ಅಪರಾಧಿಗಳಿಗೆ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಈ ಅರ್ಜಿ ಸಲ್ಲಿಸಿದ್ದಾರೆ.

ನಾವು ಕ್ಷಮಾಪಣೆ ನೀಡಿದ್ದನ್ನು ಪ್ರಶ್ನಿಸುತ್ತಿದ್ದೇವೆಯೇ ಹೊರತು ಸುಪ್ರೀಮ ಕೋರ್ಟ ಆದೇಶವನ್ನಲ್ಲ. ಸುಪ್ರೀಮ ಕೋರ್ಟ ಆದೇಶ ಸರಿಯಾಗಿದೆ, ಆದರೆ ಯಾವ ತತ್ವಗಳ ಆಧಾರದ ಮೇಲೆ ಕ್ಷಮಾಪಣೆ ನೀಡಲಾಗಿದೆ ಎಂಬುದನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಸಿಬಲ್ ಹೇಳಿದರು.

ಟಿಎಂಎಸಿ ಸಂಸದೆ ಮಹುವಾ ಮೊಯಿತ್ರಾ ಅವರು ಗುಜರಾತ್ ಸರ್ಕಾರವು ಎಲ್ಲಾ 11 ಅಪರಾಧಿಗಳ ಬಿಡುಗಡೆಹೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಮ ಕೋರ್ಟ‌ಗೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಮ ಕೋರ್ಟ ಈ ಹಿಂದೆ ಗುಜರಾತ್ ಸರ್ಕಾರಕ್ಕೆ ಕ್ಷಮಾಪಣೆ ಅರ್ಜಿಯನ್ನು ಪರಿಗಣಿಸುವಂತೆ ಸೂಚಿಸಿತ್ತು. ಜನವರಿ 21, 2008 ರಂದು ಮುಂಬೈನ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಏಳು ಸದಸ್ಯರ ಹತ್ಯೆಯ ಆರೋಪದ ಮೇಲೆ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಅವರ ಶಿಕ್ಷೆಯನ್ನು ಬಾಂಬೆ ಹೈಕೋರ್ಟ ಎತ್ತಿ ಹಿಡಿಯಿತು.

ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ ಬಿಲ್ಕಿಸ್ ಬಾನುಗೆ 21 ವರ್ಷ, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಹತ್ಯೆಯಾದವರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಾಳೆ. ಬಿಲ್ಕಿಸ್ ಬಾನು ಮತ್ತು ಆಕೆಯ ತಾಯಿ ಸೇರಿದಂತೆ ಕುಟುಂಬದ ಇತರ ನಾಲ್ಕು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ 14 ಜನರನ್ನು ಹತ್ಯೆ ಮಾಡಿದ್ದರು. ಅದರಲ್ಲಿ ಏಳು ಜನರ ಶವಗಳು ಮಾತ್ರ. ಸಿಕ್ಕಿದ್ದವು.

ಗುಜರಾತ್ ಸರ್ಕಾರವು ತನ್ನ ಕ್ಷಮಾಪಣೆ ನೀತಿಯಡಿಯಲ್ಲಿ ಅವರನ್ನು ಬಿಡುಗಡೆ ಮಾಡಲು ಅನುಮತಿಸಿದ ನಂತರ 11 ಅಪರಾಧಿಗಳು ಅಗಸ್ಟ 15 ರಂದು ಗೋಧ್ರಾ ಸಬ್ ಜೈಲಿ ಹೊರನಡೆದಾಗ ಯುದ್ಧ ಗೆದ್ದು ಬಂದಂತೆ ಹಾರ ಹಾಕಿ, ತಿಲಕವಿಟ್ಟು ಬರಮಾಡಿಕೊಳ್ಳಲಾಗಿತ್ತು. ಅವರು 15 ವರ್ಷಗಳಿಗೂ ಹೆಚ್ಚು ಜೈಲು ವಾಸವನ್ನು ಪೂರ್ಣಗೊಳಿಸಿದ್ದರು.

ಸಿಬಿಐ ತನಿಖೆಗೊಳಪಟ್ಟ ಮತ್ತು ಅತ್ಯಾಚಾರದಂಥ ಘೋರ ಅಪರಾಧಿಗಳಿಗೆ ಕ್ಷಮಾಪಣೆ ನೀಡಬಾರದೆಂದು ನಿಯಮ ಇದ್ದರೂ ಗುಜರಾತ್ ಸರ್ಕಾರ ಇವನ್ನು ಲೆಕ್ಕಿಸಿಲ್ಲ.

Share This Article