ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಐಪಿಎಸ್ ಅಧಿಕಾರಿಯ ದುರಂತ ಸಾವು!

khushihost
ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ  ಐಪಿಎಸ್ ಅಧಿಕಾರಿಯ ದುರಂತ ಸಾವು!

ಹಾಸನ: ಪೊಲೀಸ್‌ ಬೊಲೆರೋ ಜೀಪ್‌ ಅಪಘಾತಕ್ಕೀಡಾಗಿ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಹರ್ಷವರ್ಧನ್ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ಭಾನುವಾರ (ಡಿ.1 ರಂದು) ರಾತ್ರಿ ನಡೆದಿದೆ.

ಮಧ್ಯಪ್ರದೇಶದ ಜಬಲ‌ಪುರ ಮೂಲದ ಕರ್ನಾಟಕದ ಸೇವೆಗೆ ಆಯ್ಕೆಯಾಗಿದ್ದ 2023ನೇ ಸಾಲಿನ ಐಪಿಎಸ್‌ ಅಧಿಕಾರಿ ಹರ್ಷವರ್ಧನ್ ಎಂಬವರು ಮೈಸೂರಿನ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ, ಹಾಸನ ಜಿಲ್ಲಾ ಎಎಸ್ ಪಿಯಾಗಿ ಸೋಮವಾರ ಕಾರ್ಯಭಾರ ವಹಿಸಿಕೊಳ್ಳಬೇಕಿತ್ತು. ಅವರನ್ನು ಹಾಸನದ ಡಿಎಆರ್‌ ಕಾನ್ಸ‌ಟೇಬಲ್‌ ಮಂಜೇಗೌಡ ಎಂಬವರು ಮೈಸೂರಿನಿಂದ ಹಾಸನಕ್ಕೆ ಕರೆತರುತ್ತಿದ್ದಾಗ ಕಿತ್ತಾನೆ ಗಡಿಯಲ್ಲಿ ಬೊಲೆರೋ ಜೀಪ್‌ ಟೈರ್‌ ಸ್ಫೋಟಗೊಂಡು, ಪಲ್ಟಿಯಾಗಿದೆ. ಜೀಪ್‌ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೇ ಹರ್ಷವರ್ಧನ ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ಸಂತಾಪ:

ಹರ್ಷವರ್ಧನ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷವರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು. ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳ ಬೇಸರದ ಸಂಗತಿ. ವರ್ಷಗಳ‌ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷವರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.

Share This Article