ನೀರು ಕಾಯಿಸಲು ಹಾಕಿದ್ದ ಕ್ವಾಯಿಲ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

khushihost
ನೀರು ಕಾಯಿಸಲು ಹಾಕಿದ್ದ ಕ್ವಾಯಿಲ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

ಬೆಳಗಾವಿ : ಸ್ನಾನಕ್ಕೆ ನೀರು ಬಿಸಿ ಮಾಡಲು ಬಕೇಟನಲ್ಲಿ ಕ್ವಾಯಿಲ್ ಹಾಕಿದ್ದಾಗ ವಿದ್ಯುತ್ ಅವಘಡ ಸಂಭವಿಸಿ ಒಂದೇ ಕುಟುಂಬದ ಮೂವರು ಅಸು ನೀಗಿದ ಘಟನೆ ಶನಿವಾರ ಮುಂಜಾನೆ ಶಾಹೂ ನಗರದಲ್ಲಿ ಸಂಭವಿಸಿದೆ.

ಪ್ರತಿದಿನದಂತೆ ಶನಿವಾರ ಸ್ನಾನಕ್ಕೆ ಬಿಸಿನೀರು ಬೇಕೆಂದು ಬಕೆಟ್ ನಲ್ಲಿ ಎಲೆಕ್ಟ್ರಿಕ್ ಕ್ವಾಯಿಲ್ ಹಾಕಲಾಗಿತ್ತು. 9 ವರುಷದ ಅನ್ನಪೂರ್ಣ ರಾಠೋಡ ಬಹುಶಃ ಸ್ವಿಚ್ ಆಫ್ ಮಾಡದೇ ಬಕೆಟ್ ನಲ್ಲಿದ್ದ ನೀರಿಗೆ ಕೈ ಹಾಕಿರಬಹುದು. ಆಗ ತಕ್ಷಣ ವಿದ್ಯುತ್ ಶಾಕ್ ತಗುಲಿ ಕೆಳಕ್ಕೆ ಬಿದ್ದಿದ್ದಾರೆ. ಹತ್ತಿರದಲ್ಲಿದ್ದ ಆಕೆಯ ಅಜ್ಜ  ಈರಪ್ಪ ರಾಠೋಡ ಮೊಮ್ಮಗಳ ರಕ್ಷಣೆಗೆಂದು ಬಂದಾಗ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಅದರಂತೇ ಅಜ್ಜಿ ಶಾಂತವ್ವ ಕೂಡ ಅನ್ನಪೂರ್ಣಳನ್ನು ಮುಟ್ಟಿದ್ದಾರೆ. ವಿದ್ಯುತ್ ಹರಿದು ಮೂವರೂ ಸಾವಿಗೀಡಾಗಿದ್ದಾರೆ.

ಸತ್ತ ದುರ್ದೈವಿಗಳು ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದವರು ಎನ್ನಲಾಗಿದೆ. ರಾಠೋಡ ಕುಟುಂಬ ನಿರ್ಮಾಣ ಹಂತದ ಕಟ್ಟಡಕ್ಕೆ ಕಾವಲು ಕೆಲಸಕ್ಕೆ ಬಂದಿತ್ತು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ ಸ್ಥಳಕ್ಕೆ ಭೇಟಿ ನೀಡಿ ಸರಕಾರದಿಂದ ತಲಾ 2 ಲಕ್ಷ (ಒಟ್ಟು 6 ಲಕ್ಷ ರೂಪಾಯಿ) ಪರಿಹಾರ ಘೋಷಣೆ ಮಾಡಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಮತ್ತು ಎಪಿಎಂಸಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸಿದರು.

Share This Article